ತಿಪಟೂರು ಕೃಷ್ಣ


ತನ್ನ ಗರ್ಭದಲ್ಲಿ ಅಪಾರ ಸಂಪತ್ತನ್ನು ತುಂಬಿಕೊಂಡಿರುವ ನಮ್ಮ ಚೆಲುವ ಕನ್ನಡನಾಡಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ, ನಿರ್ಭಯವಾಗಿ ಹಾಗೂ ನಿರಾತಂಕವಾಗಿ ಗಣಿಗಾರಿಕೆ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ರಾಜ್ಯದಲ್ಲಿರುವ ರೈತರ ಕೃಷಿ ಭೂಮಿ, ಕಂದಾಯ ಭೂಮಿ, ಗೋಮಾಳ, ಖರಾಬು, ಸಾಮಾಜಿಕ ಹಾಗೂ ಮೀಸಲು ಅರಣ್ಯ ಪ್ರದೇಶಗಳು ಹಾಡು ಹಗಲೇ ಲೂಟಿಯಾದರೂ, ಆಗುತ್ತಿದ್ದರೂ ನಮ್ಮ ಪರಿಸರವಾದಿಗಳು, ಹಿತಚಿಂತಕರು, ಸಾಹಿತಿಗಳು, ರೈತ ಮುಖಂಡರು, ರಾಜಕಾರಣಿಗಳು, ಅಧಿಕಾರಿಗಳು ಕೊನೆಗೆ ಪತ್ರಕರ್ತರೂ ತೆಪ್ಪಗಿದ್ದು ಬಿಟ್ಟರು.
ರಾಜ್ಯದ ಹಕ್ಕುದಾರ ಕನ್ನಡಿಗ ಒಬ್ಬ ರೈತ ಗಾಡಿಯ ನೇಗಿಲಿಗೋ, ಮನೆಯ ತೊಲೆಗೋ ಒಂದು ಮರಕಡಿದರೆ ಗಂಡಸರಂತೆ ಮೀಸೆ ತಿರುವಿ ಆತನ ಮೇಲೆ ಅರಣ್ಯ ಖಾಯಿದೆಯಡಿ ಪ್ರಕರಣ ದಾಖಲಿಸಿ, ಕಟಕಟೆ ಹತ್ತಿಸುವ ಅಧಿಕಾರಿಗಳು ತಮ್ಮ ಎದುರಿಗೇ ನೂರಾರು ಮರಗಳನ್ನು ಕಡಿದು ನಿರ್ಭಯವಾಗಿ ಗಣಿಗಾರಿಕೆ ನಡೆಸುತ್ತಿದ್ದರೂ ಮೂಖರಂತೆ ನಿಂತು, ಅಸಹಾಯಕತೆ ತೋರುತ್ತಿದ್ದಾರೆ.
ಇತ್ತೀಚೆಗೆ ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆ ಬಗ್ಗೆ ಭಾರೀ ಚರ್ಚೆಗಳು, ವಾದ ವಿವಾದಗಳು, ಗಲಭೆಗಳು ನಡೆಯುತ್ತಿದ್ದರೂ ಯಾವುದೇ ಪರಿಣಾಮ ಉಂಟಾಗಿಲ್ಲ. ಬಳ್ಳಾರಿ, ಸೊಂಡೂರು, ಚಿತ್ರದುರ್ಗ, ಹೊಸದುರ್ಗ ಸೇರಿದಂತೆ ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ ಮತ್ತು ಚಿ.ನಾ.ಹಳ್ಳಿ ತಾಲೂಕುಗಳಲ್ಲಿ ನಿರಾತಂಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಅದಿರು ಕ್ರಷಿಂಗ್
ಸರಕಾರಿ ಜಮೀನು, ರೈತರ ಪಟ್ಟಾ ಜಮೀನು ಹಾಗೂ ಸಾಮಾಜಿಕ ಅರಣ್ಯ ಮತ್ತು ಮೀಸಲು ಅರಣ್ಯದಲ್ಲಿ ಪ್ರದೇಶಗಳಲ್ಲಿ ಅದಿರನ್ನು ತೆಗೆದು ಸಂಗ್ರಹಿಸಿ ಮಧ್ಯರಾತ್ರಿ ವೇಳೆ ಅದಿರನ್ನು ನಿರಂತರವಾಗಿ ಸಾಗಿಸಲಾಗುತ್ತಿದೆ. ಈ ತರಹದಲ್ಲಿ ಸಂಗ್ರಹಿಸಿದ ಕಬ್ಬಿಣದ ಅದಿರನ್ನು ತಿಪಟೂರು ತಾಲೂಕು ಹತ್ಯಾಳು ಗೇಟ್ ಬಳಿಯಿರುವ ರಸ್ತೆ ಬದಿಯ ಸ್ಟಾಕ್ ಯಾರ್ಡ್ ಹಾಗೂ ಜಯಂತಿ ಗ್ರಾಮದ ಬಳಿಯಿರುವ ಸ್ಟಾಕ್ ಯಾರ್ಡ್ ಗಳಲ್ಲಿ ಸಂಗ್ರಹಿಸಿ ಅಲ್ಲಿಯೇ ಬಹಿರಂಗವಾಗಿ ಸ್ಕ್ರೀನಿಂಗ್ ಮಾಡಿ ಸಾಗಿಸಲಾಗುತ್ತಿದೆ. ಈ ಎಲ್ಲಾ ವಿದ್ಯಮಾನಗಳು ತಿಪಟೂರು ತಾಲೂಕು ಆಡಳಿತಕ್ಕೆ ಗೊತ್ತಿದ್ದರೂ ಜಾಣ ಮೌನ ವಹಿಸಿದೆ.
ಈ ಅಕ್ರಮ ಗಣಿಗಾರಿಕೆ ಮತ್ತು ಸಂಗ್ರಹದ ಬಗ್ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಈ ಬಗ್ಗೆ ಸಾರ್ವಜನಿಕರು ಹತ್ತಾರು ಬಾರಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಜಿಲ್ಲಾಧಿಕಾರಿಗಳು ಗಣನೆಗೆ ತೆಗೆದುಕೊಳ್ಳದೇ ನಿರ್ಲಿಪ್ತರಾಗಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ತೆಪ್ಪಗಿರಲು ತಾಕೀತು ಮಾಡಿದ್ದಾರೆಂದು ಕೆಲವು ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಿಯಮಗಳಿವೆ, ಕಾನೂನಿದೆ ಹಾಗೂ ಅಧಿಕಾರವಿದೆ ಆದರೆ ಉನ್ನತಾಧಿಕಾರಿಗಳ ಭಯದಿಂದ ಉಪಯೋಗಿಸುವಂತಿಲ್ಲ ಎಂಬ ಅಳಲು ತಾಲೂಕಿನ ಕೆಲ ಅಧಿಕಾರಿಗಳದ್ದು.
ಸರಕಾರಿ ಜಮೀನುಗಳು, ರೈತರ ಜಮೀನು ಹಾಗೂ ರಸ್ತೆ ಬದಿಯಲ್ಲೇ ಕಾನೂನುಬಾಹಿರವಾಗಿ ಕಬ್ಬಿಣದ ಅದಿರಿನ ಸ್ಟಾಕ್ ಯಾರ್ಡ್ ಗಳನ್ನು ಮಾಡಿಕೊಂಡು ರಾತ್ರೋರಾತ್ರಿ ಅಕ್ರಮ ಅದಿರನ್ನು ತಂದು ಸಂಗ್ರಹಿಸಿ ಸಾಗಾಣಿಕೆ ಮಾಡಲಾಗುತ್ತಿದೆ. ಇದು ಆಯಾ ಜಿಲ್ಲಾಡಳಿತ, ತಾಲೂಕು ಆಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ಗೊತ್ತಿರುವ ಬಹಿರಂಗ ಸತ್ಯ.
ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ, ಅರಣ್ಯವನ್ನು ರಾತ್ರಿ ವೇಳೆ ಲೂಟಿ ಮಾಡುವವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅದಿರು ಸಾಗಿಸುವ ಪರ್ಮಿಟ್ ಗಳು ಸುಲಭವಾಗಿ ಸಿಗುತ್ತಿರುವುದೇ ಪರಮಾಶ್ಚರ್ಯವಾಗಿದೆ ಎಂದರೆ ಇದನ್ನು ಜನಸಾಮಾನ್ಯರಿಂದ ನಿಯಂತ್ರಿಸಲು ಸಾಧ್ಯವೇ? ಅಧಿಕಾರಿಗಳು ಮತ್ತು ಅಕ್ರಮ ಗಣಿಗಾರಿಕೆಯವರ ಈ ವ್ಯವಹಾರದ ರಹಸ್ಯವನ್ನು ಕಂಡು ಹಿಡಿಯಲಾದೀತೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.
ಚಿ.ನಾ.ಹಳ್ಳಿಯ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸರ್ವೇ ನಂ.130ರಲ್ಲಿನ ಅಬ್ಬಿಗೆ ಶ್ರೀಮಲ್ಲೇಶ್ವರ ದೇವಾಲಯದ ಸುತ್ತಾಮುತ್ತಲ 2. ಕಿ.ಮಿ. ವ್ಯಾಪ್ತಿಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಜಿಲ್ಲಾಧಿಕಾರಿ ಸೋಮಶೇಖರ್ 3.8.2008ರಂದು ಆದೇಶಿಸಿ ದೇವಾಲಯದ ವ್ಯಾಪ್ತಿಯ 200 ಮೀ. ವ್ಯಾಪ್ತಿಯ ಗಣಿಗಾರಿಕೆಯನ್ನು ರದ್ದುಪಡಿಸಿದ್ದಾರೆ. ಆದರೆ ಪುರಾತನ ಹಿಂದೂ ದೇವಾಲಯ ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಇರುವ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯೊಂದು ನಿರಂತರವಾಗಿ ಗಣಿಗಾರಿಕೆ ನಡೆಸುತ್ತಾ ದೇವಾಲಯದ ಬೆಟ್ಟಕ್ಕೆ ಹಾನಿಯಾಗುವ ಸಂಭವವಿದ್ದರೂ ಜಾಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
1991 ರಿಂದ 2007 ರವರೆಗೆ ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯ ಹಾಗೂ ಅರಣ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಕಂದಾಯ ಇಲಾಖೆ, ಉಪವಿಭಾಗಾಧಿಕಾರಿಗಳು, ಅರಣ್ಯ ಇಲಾಖೆ ಪದೇ ಪದೇ ಪತ್ರ ವ್ಯವಹಾರ ನಡೆಸಿದ್ದಾರೆ. ಆದರೆ ಈ ಅಕ್ರಮಗಳಿಗೆ ಪ್ರಮುಖ ಕಾರಣಕರ್ತರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಳ್ಳವರ ಪರ ವಕಾಲತ್ತು ವಹಿಸಿ ಗಣಿಗುತ್ತಿಗೆ ನೀಡುವ ಪ್ರಯತ್ನ ನಡೆಸಿದ್ದಾರೆ. ಆ ನಂತರ ಗಣಿಗುತ್ತಿಗೆಯನ್ನು ರದ್ದುಪಡಿಸಲು ನಡೆದ ನಾನಾ ಪ್ರಯತ್ನಗಳಿಗೆ ಗಣಿ ಇಲಾಖೆ ಸೊಪ್ಪುಹಾಕದೇ ಅರಣ್ಯ ಹಾಗೂ ದೇವಾಲಯ ವ್ಯಾಪ್ತಿಯಲ್ಲಿ ಅದಿರು ಲೂಟಿಗೆ ಪರೋಕ್ಷವಾಗಿ ಸಹಕಾರ ನೀಡಿದೆ
ಆದರೆ ಯಾರೂ ಈ ಕುರಿತು ಏನೂ ಮಾತನಾಡುತ್ತಿಲ್ಲ!.
No comments:
Post a Comment