ಪರಿಸರ ನೈರ್ಮಲ್ಯದ ಮೇಲ್ವಿಚಾರಕ : ರಣಹದ್ದುಗಳು..
ಒಂದು ಕಾಲದಲ್ಲಿ ಹತ್ತು ಹಲವು ಲಕ್ಷಗಳಲ್ಲಿ ಎಣಿಸಲ್ಪಡುತ್ತ್ತಿದ್ದ ಬೂದು ಬಣ್ಣದ ರಣಹದ್ದುಗಳು ಇತ್ತೀಚಿನ ಕೆಲವೇ ಹತ್ತು ವರ್ಷಗಳಲ್ಲಿ ಅವಸಾನದ ಹಾದಿ ತಲುಪಿರುವುದು ನಿಜಕ್ಕೂ ಶೋಚನಿಯ. ರಣಹದ್ದುಗಳ ಸಂಖ್ಯೆ 1990 ರಿಂದ ಈಚೆಗೆ ಗಣನೀಯವಾಗಿ ಇಳಿಮುಖವಾಯಿತು. ಅದರ ಸಂಖ್ಯೆಯನ್ನು ಹೆಚ್ಚಿಸಲು ತೆಗೆದುಕೊಂಡ ಎಲ್ಲಾ ಪ್ರಯತ್ನಗಳು ವಿಫಲವಾದವು.ಇದಕ್ಕೆ ಮುಖ್ಯ ಕಾರಣ ಮನುಷ್ಯನ ಪ್ರಕೃತಿ ವಿರೋಧಿ ಕಾರ್ಯಚಟುವಟಿಕೆಗಳು ಮತ್ತು ಪರಿಸರ ಹಾಳಾಗುತ್ತಿರುವುದು ಎಂದು ವಿಜ್ಞಾನಿಗಳು ಹತಾಶÀರಾಗಿ ಪದೇ ಪದೇ ಹೇಳುತ್ತಿದ್ದಾರೆ.
2004 ರಲ್ಲಿ ಅಮೆರಿಕಾದ ವಿಜ್ಞಾನಿಗಳು ಪಾಕಿಸ್ತಾನ ಮತ್ತು ಭಾರತದ ಪ್ರಾಂತ್ಯಗಳಲ್ಲಿ ಕಂಡು ಬರುವ ಸತ್ತ ರಣಹದ್ದುಗಳ ಅಂಗಾಂಶಗಳನ್ನು ತೆಗೆದು ಪ್ರಯೋಗಾಲಯದಲ್ಲಿ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದರು. ಈ ವಿಶ್ಲೇಷಣೆಯಿಂದ ಬೆಳಕಿಗೆ ಬಂದ ವಿಚಾರವೇನೆಂದರೆ ಇವುಗಳ ದೇಹದಲ್ಲಿ ಸೇರಿಕೊಂಡಿದ್ದಂತಹ ವಿಷಪದಾರ್ಥಗಳೇ ಇವುಗಳ ಸಾವಿಗೆ ಕಾರಣವಾಗಿರುವುದು. ಪ್ರಮುಖವಾಗಿ ಡೈಕ್ಲೋಫಿನಾಕ್ ಪಶು ನೋವು ನಿವಾರಕ. ಸತ್ತಂತಹ ಸಾಕು ಪ್ರಾಣಿಗಳ ದೇಹವನ್ನು ಇವುಗಳು ತಿನ್ನುವುದರಿಂದ ಆ ಸಾಕು ಪ್ರಾಣಿಗಳ ದೇಹದಲ್ಲಿದ್ದಂತಹ ವಿಷ ರಾಸಾಯನಿಕಗಳು ರಣಹದ್ದುಗಳ ದೇಹವನ್ನು ಸೇರಿತ್ತವೆ. ರಣಹದ್ದುಗಳ ದೇಹದಲ್ಲಿ ಈ ರಾಸಾಯನಿಕವು ತ್ವರಿತಗತಿಯಲ್ಲಿ ಪರಿಣಾಮವುಂಟುಮಾಡಿ, ಹಕ್ಕಿಗಳ ದೇಹ ತೀವ್ರ ಬಳಲಿಕೆಗೊಂಡು ಸಾವನ್ನಪ್ಪುತ್ತದೆ.ಹಾಗಾಗಿ ಡೈಕ್ಲೋಫಿನಾಕ್ ಪಶು ನೋವು ನಿವಾರಕ ರಣಹದ್ದುಗಳ ವಿನಾಷಕ್ಕೆ ಕಾರಣವಾಗಿರುವುದು ಕಟು ಸತ್ಯ. ಸಾಕು ಪ್ರಾಣಿಗಳ ಖಾಯಿಲೆ ಗುಣಪಡಿಸಲು ಬಳಸುತ್ತಿದ್ದ ಈ ರಾಸಾಯನಿಕ ರಣಹದ್ದುಗಳಿಗೆ ವಿಷವಾಗಿ ಪರಿಣಮಿಸಿತು. ಅಂದಿನಿಂದ ಭಾರತ ಸರ್ಕಾರ 2006 ರಲ್ಲಿ ಪಶುಗಳಿಗೆ ಬಳಸುವ ಡೈಕ್ಲೋಫಿನಾಕ್ ಪಶು ನೋವು ನಿವಾರಕ ಔಷಧಿ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಷ್ಟಾದರೂ ಅಂಡ್ರೂ ಕನ್ನಿಂಗ್ ಹ್ಯಾಮ್ (Andrew Cunningham: Zoological Society
of London) ಬಿ.ಎನ್.ಹೆಚ್.ಎಸ್ ಜೊತೆ ರಣಹದ್ದುಗಳ ಮೇಲೆ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ತಿಳಿದು ಬಂದ ವಿಚಾರವೇನೆಂದರೆ ಇಂದಿಗೂ ಕೂಡ ಡೈಕ್ಲೋಫಿನಾಕ್ ಸೋಡಿಯಂ ಅನ್ನು ಪಶು ನೋವು ನಿವಾರಕವಾಗಿ ಬಳಸುತ್ತಿರುವುದು ಕಂಡುಬಂದಿದೆ.
ಪರಿಸರದ ಸ್ವಚ್ಚತೆಯನ್ನು ಕಾಪಾಡುವ ಕರ್ತವ್ಯವನ್ನು ಚಾಚುತಪ್ಪದೆ ನಿಭಾಯಿಸುತ್ತಿದ್ದ ರಣಹದ್ದುಗಳು ತಮಗರಿವಿಲ್ಲದೆಯೆ ಸಾಯುತ್ತಿವೆ. ಅದರಲ್ಲೂ ಬಿಳಿ- ರಣಹದ್ದುಗಳು (oriental white-rumped vultures) 2000 ಇಸವಿಯಿಂದೀಚೆಗೆ ವರ್ಷಕ್ಕೆ ಶೇಕಡ 44 ರಷ್ಟು ಮರಣಿಸುತ್ತಿವೆ. ಪ್ರಪಂಚದ ಯಾವುದೇ ಹಕ್ಕಿಗಳ ಮರಣಿಸುವ ಸಂಖ್ಯೆಯ ದರ ಇಷ್ಟೋಂದು ಪ್ರಮಾಣದಲ್ಲಿರಲಿಲ್ಲ. ಇಷ್ಟು ವೇಗವಾಗಿ ಕಣ್ಮರೆಯಾಗುತ್ತಿರುವ ರಣಹದ್ದುಗಳು ಪುನಶ್ಚೇತನಗೊಳ್ಳುವುದು ದೊಡ್ಡ ಅನುಮಾನವೇ ಸರಿ. ಒಂದು ಪಕ್ಷ ಡೈಕ್ಲೋಫಿನಾಕ್ ಪಶು ನೋವು ನಿವಾರಕದ ಬಳಕೆ ಸಂಪೂರ್ಣವಾಗಿ ನಿಂತರೂ ಕೂಡ ರಣಹದ್ದುಗಳು ತಮ್ಮ ಮೊದಲಿನ ಸಂಖ್ಯೆ ತಲುಪಲ ಅನೇಕ ನೂರು ವರ್ಷಗಳೇ ಬೇಕಾಗಬಹುದು. ಏಕೆಂದರೆ ಇವುಗಳ ಸಂತಾನೊತ್ಪತ್ತಿ ಕ್ರಿಯೆ ಬಹಳ ನಿಧಾನ. ಗುಂಪುಗಳಲ್ಲಿ ಆಹಾರ ಹುಡುಕುವ , ಒಂದು ಹಕ್ಕಿಗೆ ಆಹಾರ ಕಂಡರೂ ಮಿಕ್ಕ ಹಕ್ಕಿ ಗಳನ್ನು ಕರೆಯುವ ಸ್ವಭಾವ, ಗುಂಪಿನ ಸಂಖ್ಯೆ ಕಡಿಮೆಯಾದಂತೆ ಆಹಾರ ಹುಡುಕುವ ಸಾಮಥ್ರ್ಯ ಕಡಿಮೆಯಾಗುವುದು.ಆಹಾರದ ಕೊರತೆಯುಂಟಾದರೆ ಹಸಿವಿನಿಂದ ಸಾಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಅವುಗಳು ಅಳಿಯುವ ದರ ಹೆಚ್ಚಾಗುತ್ತಲೆ ಹೋಗುತ್ತದೆ. ರಣಹದ್ದುಗಳನ್ನು ಹಿಡಿದು ಸೂಕ್ತ ವಾತಾವರಣದಲ್ಲಿ ಬೆಳೆಸಿ ಅವುಗಳನ್ನು ಉಳಿಸುವ ಪ್ರಯತ್ನ ಮಾಡಬಹುದಾದರೂ ಪುನಃ ಅವುಗಳನ್ನು ಸ್ವತಂತ್ರಗೊಳಿಸಿದಾಗ ಅದೇ ಡೈಕ್ಲೋಫಿನಾಕ್ ಪಶು ನೋವು ನಿವಾರಕಯುಕ್ತ ಮಾಂಸ ತಿಂದು ಸಾಯುತ್ತವೆ.
ಭಾರತದಲ್ಲಿ ಪ್ರಮುಖವಾಗಿ ಆರು ಬಗೆಯ ರಣಹದ್ದುಗಳು ಕಂಡು ಬರುತ್ತವೆ. ಕೆಂಪು ತಲೆಯ ರಣಹದ್ದು (Red-Headed Vulture) ಬೂದು ಬಣ್ಣದ ರಣಹದ್ದು (Cinereous Vulture) AiÀÄÄgÉöAiÀÄ£ï gÀtºÀzÀÄÝ
(Euratian Griffon) ಉದ್ದ ಕೊಕ್ಕಿನ ರಣಹದುÝ (Long-Billed Vulture) ಈಜಿಪ್ಷಿಯನ್ ರಣಹದ್ದು (Egyptian Vulture) ಮತ್ತು ಬಿಳಿ ಬೆನ್ನಿನ ರಣಹದ್ದು (Indian White-Backed Vulture)
ಇವುಗಳಲ್ಲಿ ಬೂದು ಬಣ್ಣದ ರಣಹದ್ದುಗಳು ಮತ್ತು ಉದ್ದ ಕೊಕ್ಕಿನ ರಣಹದ್ದುಗಳು ಹಿಮಾಲಯದ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ.ಮಿಕ್ಕ ರಣಹದ್ದುಗಳು ಭಾರತದೆಲ್ಲೆಡೆ ಕಂಡು ಬಂದರೂ ದಕ್ಷಿಣ ಭಾರತದ ಕಾಡುಗಳಲ್ಲಿ ವಿರಳವಾಗಿವೆ. ಈ ಎಲ್ಲಾ ರಣಹದ್ದುಗಳ ಗಾತ್ರ ನಮ್ಮಲ್ಲಿ ಸಾಮಾನ್ಯವಾಗಿ ಕಂಡು ಬರುವ ಹದ್ದುಗಳಿಗಿಂತ ಕೊಂಚ ದೊಡ್ಡದಿರುತ್ತವೆ ಆದರೆ ಕೆಂಪು ತಲೆಯ ರಣಹದ್ದು ಮತ್ತು ಬಿಳಿ ಬೆನ್ನಿನ ರಣಹದ್ದು ಗಳು ನವಿಲಿನಷ್ಟೆ ಗಾತ್ರವನ್ನು ಹೊಂದಿರುತ್ತವೆ.
ಶತಶತಮಾನಗಳಿಂದಲೂ ಪರಿಸರ ಶುಚಿತ್ವದ ರೂವಾರಿಗಳಾಗಿ ಗುರುತಿಸಿಕೊಂಡಿದ್ದ ಈ ರಣಹದ್ದುಗಳು ಕಾಡು-ಮೇಡು ಎನ್ನದೆ ಸತ್ತ ಪ್ರಾಣಿಗಳ ದೇಹವನ್ನು ಹುಡುಕಿಕೊಂಡು ಹೋಗಿ ಭಕ್ಷಿಸುತ್ತವೆ.ಈ ಮೂಲಕ ಸತ್ತ ಪ್ರಾಣಿಗಳ ದೇಹದಿಂದ ಹರಡಬಹುದಾಗಿದ್ದ ರೋಗ-ರುಜಿನಗಳನ್ನು ತಡೆಗಟ್ಟಿದಂತಾಗುತ್ತದೆ ಮತ್ತು ರಣಹದ್ದುಗಳಿಗೆ ಆಹಾರ ದೊರಕಿ ಅವು ಬದುಕುತ್ತವೆ. ಹೀಗಾಗಿ ಕಾಡಿನ ಮತ್ತು ನಾಡಿನ ಪರಿಸರಗಳ ನೈರ್ಮಲ್ಯ ಕಾಪಾಡಿದಂತಾಗುತ್ತದೆ. ಕಾಡಿನ ಪರಿಸರದ ಶುಚಿತ್ವದಿಂದ, ಕಾಡು ಸದಾ ಕಂಗೊಳಿಸುತ್ತದೆ. ಬೇರೆ ಪ್ರಾಣಿಗಳು ಯಾವುದೇ ರೋಗ-ರುಜಿನಗಳ ತೊಂದರೆ ಇಲ್ಲದೆ ಆರೋಗ್ಯವಾಗಿ ಬದುಕುತ್ತವೆ.
1990 ಕ್ಕಿಂತ ಹಿಂದೆ ಇವುಗಳು ದೊಡ್ಡ ದೊಡ್ಡ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ರಸ್ತೆ ಬದಿಗಳಲ್ಲಿ, ರೈಲ್ವೆ ಕಂಬಿಗಳ ಪಕ್ಕ, ಮೈದಾನ ಪ್ರದೇಶಗಳಲ್ಲಿ, ಕಾಡುಗಳಲ್ಲಿ, ಗುಡ್ಡ ಪ್ರದೇಶಗಳಲ್ಲಿ ಕಂಡುಬರುತ್ತಿದ್ದವು.ಆದರೆ ಈಗ ಅವುಗಳನ್ನು ನೋಡುವುದೇ ಅಪರೂಪವಾಗಿದೆ. ಎಲ್ಲಾ ಡೈಕ್ಲೋಫಿನಾಕ್ ಪಶು ನೋವು ನಿವಾರಕದ ಮಹಿಮೆ. ಮನುಷ್ಯನ ಕೆಲವು ವರ್ತನೆಗಳು ತಾನೊಬ್ಬನೆ ಬದುಕಬೇಕು, ಭೂಮಿಯ ಮೇಲಿನ ಎಲ್ಲಾ ವಸ್ತುಗಳೂ ತನ್ನದೆ ಎನ್ನವ ಆತನ ಅಂತರಾಳದ ಮಾತನ್ನು ಹೊರಹಾಕಿದಂತೆ ಭಾಸವಾಗುತ್ತದೆ. ತನ್ನ ಒಂದೇ ಒಂದು ವಿವೇಚನಾ ರಹಿತ ನಡೆಯಿಂದ ಜೀವವೈವಿಧ್ಯತೆಯಲ್ಲಿನ ಒಂದು ಬಹು ಮುಖ್ಯ ಕೊಂಡಿ ಕಳಚಿ ಬೀಳಬಹುದೆಂಬ ಪ್ರಜ್ಞೆಯ ಕೊರತೆಯೊ, ಇಲ್ಲಾ ಪರಿಸರ ಸ್ನೇಹಿಯಾದ ಒಂದು ಜೀವಿ ತನ್ನಂತೆ ಬದುಕಲಿ ಎಂಬ ಭಾವನೆಯ ಕೊರತೆಯ ಕಾರಣವೊ ಗೊತ್ತಾಗುತ್ತಿಲ್ಲ. ಅಂತು ಒಂದು ಪರಿಸರ ಸ್ನೇಹಿ ಜೊತೆಗಾರನ ಮಾರಣಹೋಮ ನಡೆದೇ ಹೋಯ್ತು.
ರಣಹದ್ದುಗಳು ಬಹಳ ಆಕರ್ಷಕ ಹಕ್ಕಿಗಳು. ಅವುಗಳ ನಡೆ, ಗಾಂಭೀರ್ಯತೆ, ಎತ್ತರದಲ್ಲಿ ಹಾರುತ್ತ ವೃತ್ತಾಕಾರದಲ್ಲಿ ಸುತ್ತುವುದು, ಗಾಳಿಯಲ್ಲಿ ರೆಕ್ಕೆ ಬಡಿಯದೆ ರೆಕ್ಕೆಯನ್ನು ಅಗಲಿಸಿಕೊಂಡು ತೇಲುವ ರೀತಿ ಮನಮೋಹಕ. ಎಷ್ಟೇ ಎತ್ತರದಲ್ಲಿದ್ದರೂ ತನ್ನ ದೂರದರ್ಶಕ ಕಣ್ಣುಗಳಿಂದ ನೆಲವನ್ನು ಇಂಚಿಂಚು ಬಿಡದೆ ಶೋಧಿಸುತ್ತಾ ಆಹಾರ ಹುಡುಕುವ ಪರಿ ಆಶ್ಚರ್ಯವನ್ನುಂಟುಮಾಡುತ್ತದೆ.
ಇವುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಡೈಕ್ಲೋಫಿನಾಕ್‍ನ ಪರ್ಯಾಯ ಔಷಧಿ ಕಂಡುಹಿಡಿಯಬೇಕು ಇಲ್ಲವೆ ಪಶುಗಳಿಗೆ ಗಿಡಮೂಲಿಕೆ ಔಷಧಿ ಮಾತ್ರ ಬಳಸಬೇಕು. ಡೈಕ್ಲೋಫಿನಾಕ್ ಪಶು ನೋವು ನಿವಾರಕ ನೀಡಿರುವ ಪಶು ಮರಣಿಸಿದ ನಂತರ ಅವುಗಳನ್ನು ಕಡ್ಡಾಯವಾಗಿ ನೆಲದಲ್ಲಿ ಹೂತು ಬಿಡಬೇಕು. ಇವಿಷ್ಟೆ ಈಗ ನಮ್ಮಲ್ಲಿರುವ ಮಾರ್ಗೋಪಾಯಗಳು.ಒಟ್ಟಾರೆ ವಿನಾಶಕಾರಿ ಡೈಕ್ಲೋಫಿನಾಕ್ ಪಶು ನೋವು ನಿವಾರಕ ಮುಕ್ತ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ. ಒಬ್ಬ ಮನುಷ್ಯನ ಔಷಧಿ ಇನ್ನೊಬ್ಬ ಮನುಷ್ಯನ ವಿಷ ಎನ್ನುವಂತಾಗಿದೆ.
ಲಿಂಗರಾಜ್. ಹೆಚ್.ಸಿ
ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ, ಅರಸೀಕೆರೆ.
No comments:
Post a Comment