Tuesday, September 13, 2011

Biodiversity of Nagapuri Forestನಾಶದಡೆ ನಾಗಪುರಿ ಸಸ್ಯ ಸಂಪತ್ತು

ಪಶ್ಚಿಮ ಘಟ್ಟಗಳ ಸೆರಗಿನ ಅಂಚಿನಂತೆ ಇರುವ ಅರಸೀಕೆರೆಯ ಚಿಕ್ಕತಿರುಪತಿ, ಬಹುದ್ದೂರಘಡ, ಹಾನಗಲ್ ನೆತ್ತಿ, ತೇಗದ ಬಯಲು, ಅಂಟ್ರಾಟ್ ಗುಂಡು, ನಾಗಪುರಿ, ಸಿದ್ದಪ್ಪ ಬೆಟ್ಟ, ಹಿರೇಕಲ್ಲು ಗುಡ್ಡ ಹಾಗು ಇತರೆ ಬೆಟ್ಟಗುಡ್ಡಗಳ ಸಾಲು ಮನಮೋಹಕ ಹಾಗು ರುದ್ರರಮಣಿಯವಾಗಿವೆ. ಕರಡಿ, ಚಿರತೆ, ತೋಳ ಮುಂತಾದ ವನ್ಯಜೀವಿಗಳ ಆವಾಸಸ್ಥಾನವಾಗಿರುವ ಈ ಬೆಟ್ಟಗುಡ್ಡಗಳು ತನ್ನ ಒಡಲಿನಲ್ಲಿ ಸಮೃದ್ಧ ಸಸ್ಯಸಂಕುಲಗಳ ಸಾಗರವನ್ನೇ ಅಡಗಿಸಿಕೊಂಡಿದ್ದು ಪ್ರಮುಖ ಮತ್ತು ಐತಿಹಾಸಿಕ ಹಿನ್ನಲೆಯುಳ್ಳ ನಾಲ್ಕು ದೇಗುಲಗಳನ್ನು ಸಹ ಹೊಂದಿ ಸಾವಿರಾರು ಭಕ್ತರಿಗೆ ತೀರ್ಥಕ್ಷೇತ್ರವೂ ಆಗಿದೆ.


ನಾಗಪುರಿ ಅರಣ್ಯ ಮತ್ತು ತಪ್ಪಲು ಪ್ರದೇಶದ ವಿಹಂಗಮಯ ನೋಟ

ಹಿಂದೆ ಇದ್ದ ದುರ್ಗಮ ದಾರಿಗಳು ಇತ್ತೀಚೆಗೆ ಭಕ್ತರಿಗಾಗಿ ವಿಶಾಲಗೊಂಡಿದ್ದು, ಮರಗಳ್ಳರು, ಬೇಟೆಗಾರರು ಮತ್ತು ಔಷಧ ಸಸ್ಯಗಳ ಕಳ್ಳಸಂತೆ ಮಾಡುವವರಿಗೆÀ ಹೆದ್ದಾರಿಯಾಗಿದೆ. ಇತ್ತೀಚೆಗೆ ತಿಪಟೂರಿನ ಮೈತ್ರಯ ಪರಿಸರ ಅಧ್ಯಯನ ಕೇಂದ್ರ ಹಾಗು ಅರಸೀಕೆರೆಯ ವಿಜ್ಞಾನ ಕೇಂದ್ರದ ಸದಸ್ಯರ ತಂಡವು ನಾಗಪುರಿ ಅರಣ್ಯ ಭಾಗದಲ್ಲಿ ಜೀವವೈವಿಧ್ಯತೆಗಳ ಸಮೀಕ್ಷೆ ನಡೆಸುತ್ತಿದಾಗ ಹಾಡುಹಗಲೆ ಮರಗಳ ಕಳ್ಳಸಾಗಣಿಕೆಯಾಗುತ್ತಿದ್ದನ್ನು ಗಮನಿಸಿದೆÉ.


ಮಾನವನ ನಿರಂತರ ಚಟುವಟಿಕೆ

ದೇವರು-ದೇವಸ್ಥಾನಗಳಿಗೆಂದು ಕರಿಮತ್ತಿ, ಭೂತಾಳೆ ಜಾತಿಯ ಮರಗಳು ಹಾಗು ಮದುವೆ ಮುಂಜಿಗೆಂದು ಇತರೆ ಅಪರೂಪದ ಮರಗಳು ಇಲ್ಲಿ ಉರಳುತ್ತಿದ್ದು, ಔಷಧ ಗಿಡಮರಗಳ ಕಾಳಸಂತೆಯ ಮಾರಟಗಾರರು ಇಲ್ಲಿನ ಸಸ್ಯಸಂಪತ್ತನ್ನು ದೋಚುತ್ತಿದ್ದಾರೆ.


ನಾಗಪುರಿ ಅರಣ್ಯ ಪ್ರದೇಶಗಳಿಂದ ಅನಧಿಕೃತವಾಗಿ ಮರಗಳನ್ನು ಸಾಗಿಸುತ್ತಿರುವುದು

ಬೇಟೆಗಾರರು ಸಂಜೆ ಸಮಯದಲ್ಲಿ ಇಲ್ಲಿ ಸುಳಿದಾಡುವುದು ಸಾಮಾನ್ಯವಾಗಿದೆ. ಈ ಬಾರಿ ಮಳೆಯು ಕಡಿಮೆಯಾಗಿರುವ ಕಾರಣ ಮೇವಿಗಾಗಿ ಊರು ದನಕರುಗಳ ಓತ್ತಡ ಈ ಅರಣ್ಯ ಭಾಗದಲ್ಲಿ ಹೆಚ್ಚಾಗಿದ್ದು ವನ್ಯಜೀವಿಗಳ ಆಹಾರಕ್ಕೆ ಕುತ್ತು ತಂದಿದೆ. ಇದರಿಂದ ವನ್ಯಜೀವಿಗಳು ಆಹಾರಕ್ಕಾಗಿ ವಲಸೆ ಹೋಗುವ ಸಾಧ್ಯತೆ ಹೆಚ್ಚಾಗಿದ್ದು ಮಂದೆ ಮಾನವನೊಂದಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ.
ಇಲ್ಲಿನ ಐತಿಹಾಸಿಕ ದೇವಸ್ಥನಗಳಿಗೆ ಬರುವ ಭಕ್ತರಿಂದ ಪ್ಲಾಸ್ಟಿಕ್ ಬ್ಯಾಗ್, ಲೋಟ ಹಾಗು ಇತರೆ ತ್ಯಾಜ್ಯದಿಂದ ಅರಣ್ಯ ಪ್ರದೇಶವು ಕೂಡ ಮಾಲಿನ್ಯವಾಗುತ್ತಿದೆ. ಈ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವನ ನಿರಂತರ ಚಟುವಟಿಕೆಗಳು ಮಂದೆ ಈ ಬೆಟ್ಟಗುಡ್ಡಗಳನ್ನು ಬೋಳಾಗಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಧ್ಯಯನ ನಡೆಸುತ್ತಿರುವ ತಂಡದ ಅಭಿಪ್ರಾಯವಾಗಿದೆ.

ಸ್ಥಾನಿಕ ಜೀವಪ್ರಭೇದಗಳು

ಅರೆ-ಶುಷ್ಕ ಕಾಡಿನ ಸಾಲಿಗೆ ಸೇರುವ ಈ ಆರಣ್ಯ ಪ್ರದೇಶಗಳು ಹಲವು ಸ್ಥಾನಿಕ ಸಸ್ಯಸಂಕುಲಗಳಾದ ಜಾಲಾಂದ್ರ, 150 ವರ್ಷಕ್ಕೂ ಹಳೆಯದಾದ ಸೈಕಾಸ್ ಮತ್ತು ಅಪರೂಪದ ಅರ್ಕಿಡ್‍ಗಳ ಆಶ್ರಯ ತಾಣವಾಗಿದೆ. ಬಯಲುನಾಡಿನ ಅರಣ್ಯ ಪ್ರದೇಶಗಳಿಂದ ಕಾಣೆಯಾಗಿರುವ ಕರಿಮತ್ತಿ, ವಿವಿಧ ಜಾತಿಯ ಭೂತಾಳೆ ಮರಗಳು ಕಂಡುಬಂದಿದೆ. ಹಾಗೆಯೇ ಅಪರೂಪದ ದಿಂಡಗ, ಪಚಾಲಿ, ನವಿಲಾಡಿ, ತುಬರ, ಜಾಲಾಂದ್ರ ಹಾಗು ಮುಂತಾದ ಅವನತಿಯಡೆ ಸಾಗುತ್ತಿರುವ 60ಕ್ಕೂ ಹೆಚ್ಚು ಪ್ರಭೇದಗಳ ಮರಗಳಿದ್ದು, ನೂರಾರು ಔಷಧ ಸಸ್ಯಗಳು ಇಲ್ಲಿ ಕಂಡುಬರುತ್ತದೆ.

ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಇಂಡಿಯನ್ ಟ್ರೀಪೈ ಪಕ್ಷಿಯು ಇಲ್ಲಿ ಕಂಡುಬಂದಿದ್ದು ಸುಂದರ ಹಾಡುಗಾರ ಹಕ್ಕಿ ಐಯೋರ, ರಾಬಿನ್‍ಗಳು ಹಾಗು ಇತರೆ ವೈವಿಧ್ಯಮಯ ಪಕ್ಷಿ ಸಂಕುಲಗಳು ಇಲ್ಲಿ ಸಾಮಾನ್ಯವಾಗಿವೆ.

ರಾಜ್ಯದಲೇ ವಿಶಿಷ್ಟವಾಗಿರುವ ಈ ಅಪರೂಪದ ಜೈವಿಕ ತಾಣವನ್ನು ಸಂರಕ್ಷಿಸಿ ಸರಿಯಾಗಿ ನಿರ್ವಹಿಸಲು ಸರ್ಕಾರ ತುರ್ತು ಕ್ರಮಕೈಗೊಳ್ಳಬೇಕು ಎಂದು ಜೀವವೈವಿಧ್ಯತೆಗಳ ಸಮೀಕ್ಷೆ-ಅಧ್ಯಯನ ನಡೆಸುತ್ತಿರುವ ತಂಡದ ಸದಸ್ಯರಾದ ಮನೋಹರ್ ಪಟೇಲ್, ಲಿಂಗರಾಜು, ಅಶೋಕ್, ಯುವರಾಜ್, ಹರೀಶ್ ಹಾಗು ಶ್ರೀಕಾಂತ್‍ರವರ ಒತ್ತಾಯ.

1 comment:

  1. Dear sir,
    I really appriciate your caring about wild life, actually it is a problem through out the world, we also facing the same problem near Nugu wild life santuary attached forest to Bandipur. in our village I fight against the encroachment of government land and planted a number of trees in this land by social forest officers.

    ReplyDelete