Sunday, November 25, 2012

Gunduthopu, Gomala and Kaval Lands of Karnataka

ಸಮುದಾಯಿಕ ಜೀವ ಸಂಸ್ಕೃತಿ ನೆಲಗಳು : 
ಗುಂಡು ತೋಪು, ಗೋಮಾಳ ಮತ್ತು ಅಮೃತಮಹಲ್
ಹುಲ್ಲುಗಾವಲು/ಕಾವಲುಗಳು


    ನಾಗರೀಕತೆ ಬೆಳೆದಂತೆ ನಮ್ಮ ಪೂರ್ವಿಕರು ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರಾಕೃತಿಕ ಹಾಗು ಸಮುದಾಯಿಕವಾಗಿ ಕಂಡುಕೊಂಡ ಅನಿವಾರ್ಯ ಅನ್ವೇಶಣೆಯೇ ಗುಂಡು ತೋಪು, ಗೋಮಾಳ ಮತ್ತು ಕಾವಲುಗಳು. ನಾಡಿನ ಆಹಾರ, ಆರ್ಥಿಕ ಭದ್ರತೆಯನ್ನು ವದಗಿಸುವ ಮತ್ತು ರಾಜ್ಯ ಸುಭದ್ರತೆಗಾಗಿ ಅರೆ-ಸೈನಿಕರನ್ನು ನಿರ್ಮಿಸುವ ತಾಣವಾಗಿತ್ತು. ಇವುಗಳ ಉದ್ದೇಶ ಹಲವು ರೀತಿಯಾಗಿದ್ದರೂ ಮೂಲವಾಗಿ ಒಂದು ರಾಜ್ಯ / ಪ್ರಾಂತ್ಯದ ಸಂಪತ್ತಿನ ಸೂಚಕವಾಗಿದ್ದವು. ಈ ಪರಿಕಲ್ಪನೆಯುಲ್ಲಿ ನೆಲೆನಿಂತ ಸಮುದಾಯಗಳ ಪಶುಸಂಗೋಪನೆ-ಕೃಷಿ-ಕಲೆಯಂತಹ  ವೈವಿಧ್ಯಮಯ ಸಂಸ್ಕೃತಿ ಯನ್ನು ಅರಳಿಸಿದವುರ ಜೊತೆಜೊತೆ ಅವಿನಾವ ಸಂಬಂಧ ಹೊಂದಿದ್ದವು. ಮೇಲಾಗಿ ಈ ಕಾವಲುಗಳು ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾಗಿದ್ದವು. ಜಾನಪದ ಕಾವ್ಯವಾದ ಜುಂಜಪ್ಪ ಕಾವ್ಯ, ಬೂದಿಬೆಟ್ಟಗಳ ಬಗಿಗಿನ ಸಂಶೋಧನೆಗಳು, ಶಾಸನ-ತುರುಗೋಳ್ ವೀರಗಲ್ಲುಗಳು ಹಿಂದೆ ರಾಜ-ಪಾಳೇಗಾರರು ತಮ್ಮ ರಾಜ್ಯದ ಜನ-ಜಾನುವಾರುಗಳಿಗಾಗಿ ಗೋಮಾಳ-ಗುಂಡುತೋಪುಗಳನ್ನು ದಾನ-ದತ್ತಿಯಾಗಿ ನೀಡಿರುವುದರ ಬಗ್ಗೆ ಹಾಗು ಗೋ ಸಂಪತ್ತನ್ನು ರಕ್ಷಿಸಲು ಮಡಿದವರ ಚರಿತ್ರೆಗಳು ಈ ಸಮುದಾಯಿಕ ಭೂಮಿಗಳ ಸಂಮೃದ್ದ ಪರಂಪರೆ ಮತ್ತು ಸಂಸ್ಕೃತಿಗಳ ಇತಿಹಾಸ ತಿಳಿಸುತ್ತವೆ.

ಗುಂಡು ತೋಪು


ಗ್ರಾಮೀಣ ಸಮುದಾಯಗಳು ಅಥವ ಸಮುದಾಯ ಪ್ರಜ್ಞಾಯುಳ್ಳ ವ್ಯಕ್ತಿಗಳು ತಮ್ಮ ಗ್ರಾಮದ ಹೊರ ಭಾಗಗಳಲ್ಲಿ ಪ್ರಜ್ಞಾಪೂರ್ವಕವಾಗಿ ಗಿಡಗಳನ್ನು ನೆಟ್ಟು ಅದರ ಪೋಷಣೆ ಹಾಗು ಸಂರಕ್ಷಣೆ ಕಾರ್ಯಮಾಡಿ ನಿರ್ಮಿಸಿದ ವೃಕ್ಷಗಳ ಸಮೂಹ ಅಥವ ತೋಪುಗಳನ್ನು ಇಂದು ಗುಂಡುತೋಪುಗಳೆಂದು ಕರೆಯುತ್ತೆವೆ.  ಬಯಲು ಸೀಮೆಯ ಹಿಂದಿನ ಮೈಸೂರ ಪ್ರಾಂತ್ಯಗಳಲ್ಲಿ ಕಂಡುಬರುವ ಈ ವೃಕ್ಷ ಸಮುಹಗಳ ನಿರ್ಮಾಣದ ಮೂಲ ಪರಿಕಲ್ಪನೆಯು ಈ ನೆಲದ ಮೂಲವಾಸಿ ಮತ್ತು ದ್ರಾವಿಡ ಸಂಸ್ಕೃತಿಯದಾಗಿರುತ್ತದೆ. ತದನಂತರದಲ್ಲಿ ಈ ಸಂಸ್ಕೃತಿಯು ವೈದಿಕ ಸಂಪ್ರದಾಯದಲ್ಲಿ ಬೆರತು ಕ್ಷೀತಿರುಹನೋಂಪಿ (ಗಿಡ ನೆಡುವ ವ್ರತ) ಎಂಬ ವೈದಿಕ ಸಂಪ್ರದಾಯವಾಯಿತು. 

ಗಿಡ ನೆಡುವ ವ್ರತದ ಉದ್ದೇಶ ಸಾಮಾನ್ಯವಾಗಿ ಪಾಪಗಳನ್ನು ತೊಳೆದು ಪುಣ್ಯಗೊಳಿಸುವುದಾಗಿರತ್ತದೆ. ಬಿಜಾಪುರದ ಹಿರೆಬೇವಿನೂರುನಲ್ಲಿ ದೊರೆತ ಕ್ರಿ. ಶ 1190 ರ ಶಾಸನವು, 30 ಗ್ರಾಮದ ಯಜಮಾನನಾದ ಬೂಪಯ್ಯನ ಹೆಂಡತಿ ಸಿರಿಯದೇವಿಯು ವೈದಿಕ ಧರ್ಮದಲ್ಲಿ ಸೂಚಿಸಿದ ಎಲ್ಲಾ ವ್ರತಗಳನ್ನು ಮಾಡಿ ಮುಗಿಸಿದರೂ ಇನ್ನೊಂದು ಕ್ಷಿತಿರುಹನೋಪಿ ವ್ರತವುಂಟೆಂದು ಕೇಳಿ ಸಂತೋಷದಿಂದ ಗಿಡ ನೆಡುವ ವ್ರತ ಆಚರಿಸಿ ಅದರಲ್ಲಿ ನೆರಳೆ, ವಿಳ್ಯದೆಲೆ, ಹಲಸು, ತೆಂಗು ಮತ್ತು ಇತರೆ ವನಸ್ಪತಿ (ಕಾಡು ಗಿಡ)ಗಳನ್ನು ನೆಟ್ಟು ಪೋಷಿಸಿದಳು ಎಂದು ತಿಳಿಸುತ್ತದೆ. ಹಾಗೆ, ಗಿಡಗಳನ್ನು ಪೋಷಿಸಲು ನೀರಿಗಾಗಿ ಸಣ್ಣ ಕೊಳ ಮತ್ತು ಆತ್ಮಸ್ಥರ್ಯ ಹಾಗು ವಿಶ್ರಾಂತಿಗಾಗಿ ಸ್ಥಳಿಯ ದೇವರ ಗುಡಿ ಕಟ್ಟಿಕೊಳ್ಳುತ್ತಿದ್ದರು. 



ಈ ಗುಂಡು ತೋಪುಗಳೂ ಸಮಾನ್ಯವಾಗಿ ಒಂದೇ ಬಗೆಯ ವೃಕ್ಷಗಳ ಸಮೂಹವಾಗಿದ್ದು ಬಹುತೇಕ ಸಮೂಹಗಳು ಹಿಪ್ಪೆ ಮರಗಳಿಂದ (ಮಧುಕ ಲಾಂಗಿಫೋಲಿಯಾ) ಕೂಡಿರುತ್ತಿದ್ದವು. ರಾತ್ರಿ ಸಮಯದಲ್ಲಿ ದೀಪ-ದೊಂದಿಯನ್ನು ಉರಿಸಲು, ಚಕ್ಕಡಿಗಳ ಕೀಲ ಎಣ್ಣೆಯಾಗಿ ಬಳಸಲು ಹಿಪ್ಪೆ ಎಣ್ಣೆಯನ್ನು / ಉತ್ಪನ್ನಗಳನ್ನು ಸಮುದಾಯದ ಅಗತ್ಯಗಳಿಗಾಗಿ ಆ ಗ್ರಾಮದ ಜನರು ಬಳಸಿಕೊಳ್ಳುತ್ತಿದ್ದರು. ಹಾಗೆ ಇವರುಗಳು ಬಿಡುವಿನ ವೇಳೆಯನ್ನು ತಮ್ಮ ಯುದ್ದ ಕೌಶಲ್ಯಗಳನ್ನು ಮತ್ತು ದೇಹದಾಢ್ಯತೆಯನ್ನು ಹೆಚ್ಚಿಸಿ ಕೊಳ್ಳಲು ಈ ವೃಕ್ಷಸಮೂಹಗಳಲ್ಲಿ ಗಾರುಡಿ ಮನೆಯನ್ನಾಗಿ ಬಳಸುತ್ತಿದ್ದುರ ಬಗೆ ಅರಸೀಕೆರೆಯ ಹುಂಡಿಗನಾಳಿನಲ್ಲಿ ಮಾಹಿತಿ ದೊರೆಯುತ್ತದೆ. ಮುಂದೆ ಅಲ್ಲಿನ ಗುಡಿ ಮಂದಿರಗಳು ದೇವಸ್ಥಾನಗಳಾಗಿ ಮತ್ತು ಕೊಳಗಳು ಕಲ್ಯಾಣಿಗಳಾಗಿ ಪರಿವರ್ತನೆಗೊಂಡವು ಎಂಬುದನ್ನು ಕಾವಲು-ಗುಂಡು ತೋಪಗಳ ಬಳಿಯಿರುವ ದೇವಸ್ಥಾನಗಳಿಂದ ತಿಳಿದು ಬರುತ್ತದೆ. (ಉದಾ:ತಿಪಟೂರು ಬಳಿಯಿರುವ ಬಿದಿರಮ್ಮನ ಗುಡಿ ತೋಪು, ಕಾವಲು ಬಂದಮ್ಮನ ಗುಡಿ ಮತ್ತು  ಬಿದರಮ್ಮನ ಗುಡಿ ಕಾವಲು).

ಕಾಲ ಕ್ರಮೇಣ ಈ ಗುಂಡು ತೋಪುಗಳು ಕಾಲ ಕಾಲಕ್ಕೆ ಪ್ರಯಾಣಿಕರು ಮತ್ತು ಸೈನಿಕರ ತಂಗುದಾಣವಾಗಿ, ವ್ಯಾಪಾರಿಗಳ ವ್ಯಾಪರ ಸ್ಥಳವಾಗಿ ಹಾಗು ಅಲೆಮಾರಿ ಪಂಗಡದ (ಬಂಜಾರರ ಹಾಗು ಜೋಗಿಗಳು) ಜನರ ನೀರ-ನೆರಳಿನ ಸುರಕ್ಷಿತ ಆಶ್ರಯ ತಾಣವಾಗಿ ರೂಪಾಂತರ ಗೊಂಡವು. ನಂತರದಲ್ಲಿ ಗುಂಡುತೋಪಿನಲ್ಲಿ ಹಿಪ್ಪೆಮರದಿಂದ ಹುಣುಸೆಮರ, ಮಾವಿನಮರ ನಂತರ ಸಂಪಿಗೆ, ಆಲ, ಅರಳಿ ಹಾಗು ಬೇವು ಮುಂತಾದ ನೂರು ವರ್ಷಕ್ಕು ಮಿಕ್ಕಿ ಬಾಳುವ ಮರಗಳು ಜನ-ಜಾನುವರುಗಳ ಅಗತ್ಯಕ್ಕೆ ಹಾಗು ಸಂದರ್ಭ ಅನುಗುಣವಾಗಿ ಈ ತೋಪಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ. 


ಗೋಮಾಳಗಳ :


ದಖ್ಖನ್ ಪ್ರಸ್ಥ ಭೂಮಿಯ ವಿಶಾಲ ಮೈದಾನದಲ್ಲಿ ಹರಿಯುತ್ತಿದ್ದ ಕಾವೇರಿ ತೀರದಿಂದ ಗೋಧಾವರಿಯವರೆಗು ಹಬ್ಬಿದ ಅಂದಿನ ಕರುನಾಡನ್ನು, ಕದಂಬರು, ಗಂಗ-ನೊಳಂಬರು, ಚಾಲುಕ್ಯ-ರಾಷ್ಠ್ರಕೂಟರು, ಚೋಳ-ಪಲ್ಲವರು, ವಿಜಯನಗರ-ಮೈಸೂರು ಮಹಾರಜರುಗಳ ಆಳ್ವಿಕೆ ಮಾಡಿದ ಪ್ರಾಂತ್ಯ/ರಾಜ್ಯಗಳಲ್ಲಿ  ಅಪಾರ ಜೀವವೈವಿಧ್ಯತೆ ಹಾಗು ಸಂಸ್ಕೃತಿ ಭರಿತ ಈ ಸಮುದಾಯಿಕ ನೆಲಗಳು ಅಸ್ಥಿತ್ವದಲ್ಲಿರುವುದು ಕಂಡುಬರುತ್ತದೆ.

ಅಂದಿನ ದಿನಗಳಲ್ಲಿ ನೆಲೆನಿಂತ ಹಳ್ಳೀಗಾಹಿಗಳು, ಸಮಾನ್ಯವಾಗಿ ಪಶುಸಂಗೋಪನೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಇವರುಗಳು ಗೋ-ಗ್ರಹಣ(ಪರ ರಾಜ್ಯದ ಗೋಸಂಪತ್ತನ್ನು ಅಪಹರಿಸುವು ಒಂದು ಪ್ರಮುಖ ಸೈನಿಕ ಚಟುವಟಿಕೆ), ಶತ್ರುಗಳ ಆಕ್ರಮಣ ಮತ್ತು ನಾಡಿಗೆ ವಿಪತ್ತು ನಿವಾರಣ ಸಂದರ್ಭದಲ್ಲಿ ರಾಜ-ಪಾಳೇಗಾರರೊಂದಿಗೆ ಕೈಜೋಡಿಸಿ ಅರೆಕಾಲಿಕ ಸೈನಿಕರಾಗಿ ಯುದ್ದಗಳಲ್ಲಿ ಭಾಗವಹಿಸುತ್ತಿದ್ದರು.





ಆಗ ಈ ರಾಜ/ಆಡಳಿತಗಾರರು ನೆಲೆನಿಂತ ಈ ಗ್ರಾಮೀಣ ಜನರ  ಕೃಷಿಯ ಹೊರೆತು ಪರ್ಯಾಯ ಸಂಪತ್ತಾದ ಪಶುಸಂಗೋಪನೆ ಚಟುವಟಿಕೆಗಳಿಗೆ ಪೂರಕವಾಗಿರಲೆಂದು ಹಾಗು ಶಾಸ್ತ್ರಗಳು ಪ್ರಾಣಿ-ಗಿಡಮರಗಳ ಬಗೆಗಿನ ಹೊಣೆಗಾರಿಕೆ ಮತ್ತು ಗೌರವದ ಬಗ್ಗೆ ಸೂಚಿಸಿರುವ ನಿಯಮ ನಡಾವಳಿಗಳ ಹಾಗು ಪರಂಪರೆಯ ಅನುಗುಣವಾಗಿ, ಆಡಳಿತಗಾರರು, ಗ್ರಾಮಗಳಲ್ಲಿ ನೆಲೆನಿಂತ ಅರೆಕಾಲಿಕ ಸೈನಿಕ ಜನಸಮುದಾಯಕ್ಕೆ ಆಡಳಿತ ಸುಪದ್ರ್ದಿನಲ್ಲಿದ ಹುಲ್ಲುಗಾವಲುಗಳಿಂದ ಕನಿಷ್ಠ 200 ರಿಂದ 500 ಎಕರೆ ವಿಸ್ತೀರ್ಣದ ಭೂಮಿಯನ್ನು ದಾನ-ದತ್ತಿಯಾಗಿ ನೀಡುತ್ತಿದ್ದರಬಹುದು. ಹಾಗೆ ಪಡೆದ ಅಂತಹ ಪ್ರದೇಶಗಳು ಇಂದು ಗೋಮಾಳ, ಹುಲ್ಲು ಬನಿ, ಹುಲ್ಲು ಬಾರೆಗಳಾಗಿವೆ. ಇವುಗಳಲ್ಲಿ ದನ ಕರು, ಕುರಿ, ಮೇಕೆ, ಕುದುರೆ ಹಾಗು ಕತ್ತೆಗಳನ್ನು ಸಲಹುತ್ತ ವಿವಿಧ ಉಪ ಕಸುಬಗಳಲ್ಲಿ ಜನರುಗಳು ತಮ್ಮನು ತೊಡಗಿಸಿಕೊಳ್ಳುತ್ತಿದ್ದರು.

ಕಾವಲುಗಳು (ಹುಲ್ಲುಗಾವಲು): 


ಹಾಗೆ, ಮತ್ತೊಂದಡೆ ರಾಜ-ಪಾಳೆಗಾರರು/
ಆಡಳಿತಗಾರರು ತಮ್ಮ ಆಡಳಿತ ಸುಭದ್ರತೆಗಾಗಿ, ಸೈನ್ಯದ ಯುದ್ಧ-ಆಹಾರ ಸಾಮಾಗ್ರಿಗಳನ್ನು ಸಾಗಿಸಲು ಮತ್ತು ರಾಜಪರಿವಾರಕ್ಕೆ ಅಗತ್ಯವಾದ ಹಾಲು, ಬೆಣ್ಣೆ-ಮೊಸರು ಪೂರೈಕೆಗಾಗಿ, ವಿಶಿಷ್ಠ ತಳಿಯ ಜಾನುವಾರುಗಳನ್ನ (ಹೋರಿ, ದನ, ಹಾಗು ಕುದುರೆಗಳು) ಮೀಸಲಿರಿಸುತ್ತಿದ್ದರು. ಅವುಗಳ ತಳಿ ಸಂವರ್ಧನೆ, ಸಂರಕ್ಷಣೆ ಮತ್ತು ಅಭಿವೃದ್ದಿಗಾಗಿ ದಖ್ಖನ ಮೈದಾನ ಪ್ರದೇಶಗಳಲ್ಲಿ ಮೀಸಲಿಟ್ಟ ಹುಲ್ಲುಗಾವಲುಗಳೇ ‘ಕಾವಲುಗಳು’. 

ಇಲ್ಲಿನ ವೈವಿಧ್ಯಮಯ ಹುಲ್ಲು ಹಾಗು ಸಸ್ಯ ಪ್ರಭೇದಗಳುನ್ನು ನೇರವಾಗಿ ಅಥವ ಪರೋಕ್ಷವಾಗಿ ಅವಲಂಬಿಸಿ ಅಪರೂಪದ ಗ್ರೇಟ್ ಇಂಡಿಯನ್ ಬಸ್ಟರ್ಡ, ಲೆಸ್ಸರ್ ಪ್ಲೊರಿಕಾನ, ಹಾಗು ಇತರೆ ಹುಲ್ಲುಗಾವಲು ಪಕ್ಷಿ-ಕೀಟಗಳು, ಕೃಷ್ಣಮೃಗ, ಚಿರತೆ, ತೋಳ, ನರಿ, ಚಿಪ್ಪುಹಂದಿ, ಮುಳ್ಳುಹಂದಿ, ಮುಂಗಸಿ, ಮೊಲ, ಸಹಿತ ಇತರೆ ವನ್ಯಜೀವಿಗಳ ಇಲ್ಲಿನ ಆವಾಸಿಗಳಾಗಿರುತ್ತ್ತವೆ.



ಅಂದಿನ ವಿಜಯನಗರ ಹಾಗು ಮೈಸೂರು ಆಡಳಿತಗಾರರು ಜಾನುವಾರಗಳು ಮತ್ತು ಕಾವಲುಗಳ ನಿರ್ವಹಣೆಗೆ ‘ಕರುಹಟ್ಟಿ’ ಎಂಬ ಇಲಾಖೆಯನ್ನು ಸ್ಥಾಪಿಸಿದ್ದರು. ಮಾರ್ಕ್ ವಿಲ್ಕ್ಸ ತನ್ನ ‘ಹಿಸ್ಟಾರಿಕಲ್ ಸ್ಕೇಚ್ಸ್ ಆಫ್ ಸೌತ್ ಇಂಡಿಯ’ ಎಂಬ ಪುಸ್ತಕದಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ್, 1672-1704 ರಲ್ಲಿ ಕಾವಲು ಮತ್ತು ಜಾನುವರುಗಳ ಉತ್ತಮ ನಿರ್ವಹಣೆಗೆ ಕರುಹಟ್ಟಿಯನ್ನು ‘ಬೆಣ್ಣೆ ಚಾವಡಿ’ ಎಂದು ಹೆಸರಿಸಿ ಪ್ರತ್ಯೇಕ ಆಡಳಿತಾತ್ಮಕ ಇಲಾಖೆಯನ್ನು ಸ್ಥಾಪಿಸಿದರ ಬಗ್ಗೆ ಬರೆದಿರುತ್ತಾನೆ.

ಮೈಸೂರು ಪ್ರಾಂತ್ಯದ ಗೋಪಾಕರಾದ ಗೊಲ್ಲ ಜನಾಂಗದವರನ್ನು ಬೆಣ್ಣೆಚಾವಡಿಯ ಆಡಳಿತಕ್ಕೆ ಒಳಪಡಿಸಿದ ಚಿಕ್ಕದೇವರಾಜರು. ಗೊಲ್ಲರ ದನಗಳನ್ನೂ ಸೇರಿಸಿದಂತೆ ಬೆಣ್ಣೆಚಾವಡಿಯ ಚಿತ್ತದಲ್ದೂರು, ಹಾಗಲವಾಡಿ ಮತ್ತು ಹಳ್ಳಿಕಾರ ಎಂಬ ವಿಶಿಷ್ಠ ತಳಿದನಗಳನ್ನು ಮೇಯಿಸಲು ಒಟ್ಟು 4,13,539 ಎಕರೆ ವಿಸ್ತೀರ್ಣ 240 ವಿಶಾಲವಾದ ಹುಲ್ಲುಗಾವಲನ್ನು (ಕಾವಲು) ಋತುಮಾನ ಮತ್ತು ಮೇವಿನ ಲಭ್ಯತ್ಯೆ ಅನುಗುಣವಾಗಿ ಮೀಸಲಿರಿಸಿದ್ದರು. ವಿರಳ ಮಳೆಮಾರುತ ಪಡೆಯುವ ದಖ್ಖನ ಮೈದಾನ ಪ್ರದೇಶದ ಕಾವಲುಗಳನ್ನು ಬೆÉೀಸಿಗೆ, ಮಳೆ ಮತ್ತು ಚಳಿಗಾಲದ ಕಾವಲುಗಳಾಗಿ ವಿಂಗಡಿಸಿದ ‘ಬೆಣ್ಣೆ ಚಾವಡಿ’ ಇಲಾಖೆಯು ಈ ಪರಿಸರಾತ್ಮಕ ಕಾರಣಗಳಿಂದಗಿ ತನ್ನ ದನಗಳನ್ನು ಅಲೆಮಾರಿ ಪದ್ಧತಿಯಲ್ಲಿ ಮೇಯಿಸುತ್ತಿತ್ತು. ಬೇಸಿಗೆ ಕಾವಲುಗಳು ಕೆರೆ-ಕಟ್ಟೆ ಪ್ರದೇಶಗಳಿಂದ ಕೂಡಿದ್ದು, ಚಿಗರು ಹುಲ್ಲು ಹುಟ್ಟಿ ಜಾನುವಾರುಗಳಿಗೆ ಮೇವಿನ ಅಗತ್ಯತೆ ಪೂರೈಸುತ್ತಿದ್ದವು. ಅಲ್ಲಿ ಸ್ವಾಭಾವಿಕವಾಗಿ ಹುಟ್ಟಿ ಬೆಳೆದ ಈಚಲು, ಬೇಲ, ಜಾಲಿ ಮುಂತಾದ ಕುರಚುಲು ಜಾತಿಯ ಮರಗಳು ವಾತವರಣದ ಉಷ್ಣತೆಯ ತೀವ್ರತೆಯನ್ನು ಕಡಿಮೆ ಮಾಡಿ ಜಾನುವಾರುಗಳಿಗೆ ನೆರಳಿನ ಆಸರೆಯನ್ನು ನೀಡುತ್ತಿದ್ದವು. ನಂತರ ಹೈದಾರಲಿಯು ವಿವಿಧ ಪ್ರಾಂತ್ಯದ ಪಾಳೇಗಾರರಿಂದ ವಶಕ್ಕೆ ಪಡೆದ ಸುಮಾರು 60,000 ಸಾವಿರ ರಾಸುಗಳನ್ನು ಯುದ್ದಗಳಲ್ಲಿ ಬಳಸುತ್ತಿದ್ದನು. ಬೆಣ್ಣೆಚಾವಡಿಯು ಹೆಸರನ್ನು ನಂತರದಲ್ಲಿ ಅಮೃತ್ ಮಹಲ್ ಎಂದು ಬದಲಿಸಿದ ಟಿಪ್ಪು ಸುಲ್ತಾನ್, ಇವುಗಳ ನಿರ್ವಹಣೆ ಮತ್ತು ಅಭಿವೃದ್ದಿಗೆ ವಿಶೇಷ ಕಾಳಜಿವಹಿಸಿ ಯುದ್ದಗಳಲ್ಲಿ ಈ ರಾಸುಗಳನ್ನು ಬ್ರಿಟೀಷರ ವಿರುದ್ದ ಪರಿಣಾಮಕಾರಿಯಾಗಿ ಬಳಸಿದ್ದನು. ಅಂದಿನ ದಿನಗಳಲ್ಲಿ ರಾಜನೀತಿಜ್ಞರ ಕಣ್ಮಣಿಯಾಗಿದ್ದ ಈ ರಾಸುಗಳು ಮತ್ತು ಕಾವಲುಗಳು  1799ರಲ್ಲಿ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತು. 1813 ರಿಂದ 1923 ಬ್ರಿಟೀಷರ ಸ್ಥಳಿಯ ಜನ ವಿರೋಧಿ ಆರ್ಥಿಕ ನೀತಿಗಳಿಂದ ನಲುಗಿದ  ಅಮೃತ್ ಮಹಲ್ ಇಲಾಖೆಯು ತನ್ನ ಆಡಳಿತ ಮತ್ತು ನಿರ್ವಹಣೆಯಲ್ಲಿ ಬಹಳಷ್ಟು ಏರುಪೇರು ಕಂಡ ಹೆಚ್ಚನ ರಾಸು ಹಾಗು ಕಾವಲುಗಳನ್ನು ಕಳೆದು ಕೊಂಡಿತು. 1923 ರಲ್ಲಿ ಕೃಷಿ ಇಲಾಖೆಗ ಸೇರಿ 1944 ನಂತರ ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ನಿರ್ವಹಣೆಯಲ್ಲಿದೆ.


ಸದ್ಯೆ ಈ ಕಾವಲು ಪ್ರದೇಶಗಳು ಕರ್ನಾಟಕದ ದಕ್ಷಿಣ ದಖ್ಖನ ಮೈದಾನ ಪ್ರದೇಶದ ಐದು ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ಸಂಮೃದ್ದವಾಗಿ ಕಂಡುಬಂದಿದ್ದು, ಉತ್ತರ ದಖ್ಖನ ಮೈದಾನ ಪ್ರದೇಶದ ಕಾವಲುಗಳು ನೀಜಾಮರ ಕಾಲದಲ್ಲಿ ಕೃಷಿಗಾಗಿ ಸಂಪೂರ್ಣ ಭೂಮಿಯನ್ನು ಬಳಸಿರುವುದು ಕಂಡುಬರುತ್ತದೆ. ಇಂತಹ ಸಮುದಾಯಿಕ ನೆಲಗಳಾದ ಗುಂಡು ತೋಪು, ಗೊಮಾಳ ಮತ್ತು ಕಾವಲುಗಳನ್ನು ಪರಿಪೂರ್ಣವಾಗಿ ಅವಲಂಬಿಸಿ ಪಶುಪಾಲನಾ ಸಂಸ್ಕೃತಿ ಹಿನ್ನಲೆಯುಳ್ಳ ಮತ್ತು ಪಶುಸಂಗೋಪನೆಯನ್ನು ಮೂಲ ವೃತ್ತಿಯನ್ನಾಗಿಸಿಕೊಂಡ ಹಲವು ಸಮುದಾಯಗಳು (ಗೊಲ್ಲರು, ಕುರುಬರು, ಲಂಬಾಣಿ ಅಥವ ಬಂಜಾರರು) ಅರಳಿದವು.  ಅವರುಗಳು ತಮ್ಮ ಪಶು-ಪ್ರಾಣಿ ಸಂಪತ್ತನ್ನು ಪ್ರಾಕೃತಿಕವಾಗಿ ಬಂದ ಅನುಭವ ಜ್ಞಾನ ಶ್ರೀಮಂತಿಕೆಯಿಂದ ಅಭಿವೃದ್ದಿಪಡಿಸಿದರು. ಅವುಗಳಲ್ಲಿ ವಿಶ್ವಪ್ರಸಿದ್ದ ಅಮೃಮಹಲ್. ಕಿಲಾರಿ, ದೆವಣಿ, ಕೃಷ್ಣವ್ಯಾಲಿ, ಹಳ್ಳಿಕಾರ್, ಚಳ್ಳೆಕೆರೆ ಕರಿಕುರಿ, ಬನ್ನೂರು ಮರಿ, ಹೀಗೆ ಹಲವಾರು ತಳಿಗಳನ್ನು ಜಗತ್ತಿಗೆ ನೀಡಿದ ಕೊಡುಗೆಗಳಾಗಿವೆ. 

ಇತ್ತೀಚಿನವರೆಗು ಪಶು-ಪ್ರಾಣಿಗಳಿಗಾಗಿ ಹಾಗು ಅವುಗಳನ್ನು ಅವಲಂಬಿಸಿದ ಸಮುದಾಯಗಳ ಸುರಕ್ಷಿತ ಮತ್ತು ಸಂರಕ್ಷಿತ ಬದುಕಿಗಾಗಿ ಮೀಸಲರಿಸಿದ್ದ ಈ ಸಮೃದ್ದ ಗೋಮಾಳ, ಹುಲ್ಲುಬನ್ನಿ, ಹುಲ್ಲುಗಾವಲು, ಹುಲ್ಲುಬಾರೆ ಹಾಗು ಕಾವಲು ಭೂಮಿಗಳು, ನಾಡಿನ ಗ್ರಾಮೀಣ ಸಮುದಾಯಗಳ ಮತ್ತು ರಾಜ್ಯದ ಸಂಪತ್ತಿನ ಸೂಚಕವಾಗಿದ್ದವು. ಹಾಗೆ, ಪರಿಸರಾತ್ಮಕವಾಗಿ, ಹುಲ್ಲುಗಾವಲು ಪ್ರಾಣಿ, ಪಕ್ಷಿ, ಕೀಟ ಸಂಕುಲಗಳ ಆಶ್ರಯ ತಾಣವಾಗಿ, ಜಲ ಮೂಲವಾಗಿ, ಕಟ್ಟಿಗೆ, ಮೇವಿನ ನೆಲವಾಗಿ ಧಾರ್ಮಿಕ ಮತ್ತು ಸಂಸ್ಕøತಿಕವಾಗಿ ಮನುಷ್ಯನ ಮನಸ್ಸಿಗೆ ಮುದ ನೀಡುವ ಬೆಡಗಿನ ತಾಣಗಳಾಗಿವೆ. ಉದಾ: ತಿಪಟೂರಿನ ಬಿದಿರಮ್ಮನಗುಡಿ ಕಾವಲು ಹಾಗು ಅಲ್ಲಿನ ಕಾವಲು ಬಂಧಮ್ಮ, ಚಳ್ಳೇಕೆರೆಯ ಕುದಾಪುರದ ಅಜ್ಜಯೈನ ಗುಡಿ, ಮತ್ತು ಹಾಸನ ರಾಯಸಂದ್ರ ಕಾವಲಿನ ಅಮರಗಿರಿ ರಂಗಯ್ಯನ ಗುಡಿ. ಉಳಿದಿರುವ ಈ ಅಲ್ಪ ಸಮುದಾಯಿಕ ನೆಲೆಗಳನ್ನು ಆಶ್ರಯಿಸಿರುವ ಚಳ್ಳೇಕೆರೆ, ಸಿರಾ, ಮಧುಗಿರಿ, ಕೊರಟಗೆರೆ, ಪಾವಗಡ, ಹಿರಿಯೂರು ಭಾಗದ ಬಹುತೇಕ ಕುರಿಗಾಹಿ ಸಮುದಾಯಗಳು ತಮ್ಮ ಜಾನುವಾರುಗಳೊಂದಿಗೆ ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು ಹಾಗು ದಾವಣಗೆರೆ ಜಿಲ್ಲೆಗಳಿಗೆ ಮೇವು-ನೀರಿಗಾಗಿ ಚಳಿಗಾಲ ಮತ್ತು ಬೇಸಿಗೆ ಕಾಲದ ಕಾವಲುಗಳಿಗೆ ವಲಸೆಹೋಗುವ ಪರಿಪಾಟವನ್ನು ಇಂದಿಗು ಮುಂದುವರಿಸುತ್ತಿವೆ.



ಕೊನೇಹಳ್ಳಿಯ ಬಿದಿರಮ್ಮನಗುಡಿ ಕಾವಲಿನಲ್ಲಿ ಅವನತಿಯ ಅಂಚಿನಲ್ಲಿರುವ ಕೃಷ್ಣಮೃಗ, ತೋಳ, ಕತ್ತೆಕಿರುಬ, ನರಿ ಹಾಗು ಬಿಲ ಮತ್ತು ಗೂಡುಗಳಲ್ಲಿ ವಾಸಿಸುವ ಮುಳ್ಳುಹಂದಿ, ಮೊಲ, ಹಾವು ಇತ್ಯಾದಿ ಪ್ರಾಣಿಗಳು, 40 ಕ್ಕೂ ಹೆಚ್ಚು ವೈವಿಧ್ಯಮಯ ಚಿಟ್ಟೆ, 70 ಕ್ಕೂ ಹೆಚ್ಚು ಪಕ್ಷಿ ಹಾಗು ಕೀಟ ಸಂಕುಲಗಳು, 278 ಕ್ಕೂ ಹೆಚ್ಚು ಸಸ್ಯಸಂಕುಲಗಳು ಈ ಹುಲ್ಲುಗಾವಲಿನ ಜೈವಿಕ ಪರಿಸರ ವ್ಯವಸ್ಥೆಯಲ್ಲಿ ಆವಾಸಿ ಹಾಗು ಪ್ರಮುಖ ಕೊಂಡಿಗಳಾಗಿರುವುದು ಕಂಡುಬರುತ್ತದೆ. ಅಧ್ಯಯನದಲ್ಲಿ ಕನಿಷ್ಟ 40 ಹುಲ್ಲಿನ ಪ್ರಭೇದಗಳು ಕಂಡುಬಂದಿರುತ್ತದೆ. ಇವುಗಳು ಇಲ್ಲಿನ ಜೈವಿಕ ಪರಿಸರ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಪಾತ್ರವಹಿಸಿದ್ದು, ಮಳೆ ನೀರು ಇಂಗಿಸುವದು, ಮಣ್ಣು ಸವಕಳಿ ತಡೆಯುವುದು, ಮಣ್ಣಿನಲ್ಲಿ ಜೈವಿಕ ಪ್ರಕ್ರಿಯೆಗೆ ಪೂರಕವಾಗಿರುವಂತೆ ತೇವಾಂಶ ಹಿಡಿದಿಡುವುದು, ಸಸ್ಯ ಆಹಾರಿ ಪ್ರಾಣಿಗಳಿಗೆ ಆಹಾರವಾಗುವುದು, ಪಕ್ಷಿ-ಕೀಟಗಳಿಗೆ ಆಶ್ರಯ ನೀಡುವುದು ಮುಂತಾದ ಪರಿಸರ ಸೇವೆ ಮಾಡುತ್ತಿರುತ್ತದೆ. ಸಮಾನ್ಯವಾಗಿ ಈ ಹುಲ್ಲು ಪ್ರಭೇದಗಳಲ್ಲಿ ವರ್ಷಗಟ್ಟಲೆ ಬಾಳುವ ಮತ್ತು ಋತುಮಾನಕ್ಕೆ ಮಾತ್ರ ಸೀಮಿತವಾದ ಹುಲ್ಲು ಪ್ರಭೇದಗಳು ಇರುತ್ತವೆ. ಪ್ರತಿ ಹುಲ್ಲು ಪ್ರಭೇದ ತನ್ನದೆ ಆದ ಖನಿಜ ಮತ್ತು ಪೊಷಕಾಂಶಗಳು ಒಳಗೊಂಡಿರುತ್ತದೆ. ತುಮಕೂರು ಜಿಲ್ಲೆಯಲ್ಲಿರುವ ಕಾವಲುಗಳಲ್ಲಿ ಮಣ್ಣಿನ ಸ್ವಭಾವ ಗುಣದಿಂದ ಮತ್ತು ಅಲ್ಪ ಮಳೆಯ ಮಾರುತದಿಂದಾಗಿ ವರ್ಷಗಟ್ಟಲೆ ಬಾಳುವ ಹುಲ್ಲು ಪ್ರಭೇದಗಳು ಪ್ರಧಾನವಾಗಿದ್ದು, ಋತುಮಾನದ ಪ್ರಭೇದಗಳು  ಬಹು ವಿರಳವಾಗಿರುವುದು ಕಂಡು ಬರುತ್ತದೆ. 


ಸಮುದಾಯಿಕ ನೆಲಗಳನ್ನು ನಿಶ್ಚಯದಿಂದ ನಿರೂಪಿಸುವ, ಕಾಯ್ದೆ, ನಿಯಮ ಮತ್ತು ರಾಜ್ಯಭಾರ ಕ್ರಮಗಳು


ಭೂ ಬಳಕೆಯ ವಿಧಾನ

ಪ್ರವೇಶಾಧಿಕಾರ

ಹಕ್ಕುಗಳು

ನಿಯಂತ್ರಿಸುವ ಇಲಾಖೆ

ಜ್ವಲಂತ ಸ್ಥಿತಿ-ಗತಿ







ಅಮೃತ್ ಮಹಲ್ ಕಾವಲುಗಳು
  •  ಸೆಕ್ಷನ್ 33, ಕರ್ನಾಟಕ ಅರಣ್ಯ ಕಾಯ್ದೆ 1963 
  • ಸೆಕ್ಷನ್ 33, ಕರ್ನಾಟಕ ಅರಣ್ಯ ನಿಯಮ,1969 
  • ಸೆಕ್ಷನ್ 39 ಕರ್ನಾಟಕ ಕಂದಾಯ ಕಾಯ್ದೆ,1964 (ಕ.ಕ.ಕಾ 1964 ರ 12)
  • ರಾಜ್ಯ  ಸರ್ಕಾರ ಸೆಕ್ರೇಟೇರಿಯೆಟ್ ಸುತ್ತೋಲೆ ಸಂಖ್ಯೆ 
  • AAHHVLS79 ದಿನಾಂಕ 19/22.03.1979 
  • ಕರ್ನಾಟಕ  ಸರ್ಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿರವರ ಸುತ್ತೋಲೆ ಸಂಖ್ಯೆ ಖಆ 3ಐಉP 95 
  • ಭೂಕಂದಾಯ ಕಾಯ್ದೆ(kar Act 12 of 1964)
  • ದಿನಾಂಕ 20.3.2001 ಕರ್ನಾಟಕದ ಉಚ್ಚ ನ್ಯಾಯಾಯದ ಪ್ರತಿ ಅಹವಾಲ್ಗೆ ನೀಡಿದ ತೀರ್ಪಿನ ಸಂಖ್ಯೆ 17954/1997 
  • ಕಾನೂನು ಇಲಾಖೆ ಅಭಿಪ್ರಾಯಗಳ ಸಂಖ್ಯೆ : AHF 07 AMBHU 2001, ದಿನಾಂಕ ಮತ್ತು ಸಂಖ್ಯೆ : 818 ಅಭಿಪ್ರಾಯ - iii 2003

ಪಶು ಪಾಲನ ಇಲಾಖೆಯಿಂದ ತಳಿ ಸಂವರ್ದನೆ

ಹುಲ್ಲುಗಾವಲು, ಇತರೆ ಮರ-ಮಕ್ಕಿಗಳು, ಮೇವು ಬಾರೆ,

ನಿಯಂತ್ರಿತ

ಅಲೆಮಾರಿ ಕುರಿಸಾಕಣೆದಾರರು ಮತ್ತು ಸ್ಥಳಿಯರಿಗೆ ಕೆಲವು ತಿಂಗಳು ಮಾತ್ರ ಸೆಸ್  ಆದರದಲ್ಲಿ ನಿಯಂತ್ರಿತ ಮೇವು ಬಳಕೆ.


ಪಶು ಪಾಲಸ ಮತ್ತು ಪಶು ವೈದ್ಯಕೀಯ ಸೇವ ಇಲಾಖೆ ಹಾಗು ಅರಣ್ಯ ಇಲಾಖೆ

ಬಹುತೇಕ ಕೃಷಿಗಾಗಿ ಒತ್ತುವರಿಯಾಗಿರುತ್ತದೆ

ಹಲವು ಕಾವಲುಗಳನ್ನು ಕಂದಾಯ ಇಲಾಖೆಯು ಭೂ ಬ್ಯಾಂಕ್, ಕೈಗಾರಿಕೆ ಇಲಾಖೆ ಹಾಗು ಸಂಸ್ಥೆಗಳಿಗೆ ಅನಧಿಕೃತ ಪರಭಾರೆ,

ಅರಣ್ಯ ಮತ್ತು ಪಶು ಪಾಲನ ಇಲಾಖೆಯಡಿ ನಿರ್ವಹಣೆಯಾಗುತ್ತಿರುವದು




ಗೋಮಾಳ

  • ಸ. ಆ. ಸಂ – 20588-ಆರ್ ಎಫ್., 139-92,.1. 1 ಜೂನ್ 1893,
  • ಸ. ಆ. ಸಂ – ಆರ್973 ಎಫ್.ಟಿ 88-15-22, ದಿ. 27 ಜುಲೈ 1971
  • ಸೆ-72, ಕರ್ನಾಟಕ ಭೂ ಕಂದಾಯ ಕಾಯ್ದೆ, 1964
  • ಸೆ-97, ಕರ್ನಾಟಕ ಅರಣ್ಯ ನಿಯಮ, 1966.
  • ಮೈಸೂರು ಭೂ ಕಂದಾಯ ಕಾಯ್ದೆ,1902

ಹುಲ್ಲುಗಾವಲು, ಇತರೆ ಮರ-ಮಕ್ಕಿಗಳು, ಮೇವು ಬಾರೆ,
ಖರಾಬು ?


ಪ್ರವೇಶ ಅನಿರ್ಭಂದಿತ.

ಸೌದೆ, ಸ್ವ ಬಳಕೆಗೆ ಮೇವು 

ಕಂದಾಯ ಇಲಾಖೆ

ಸಮಾಜಿಕ ಅರಣ್ಯದಡಿ ಇಲ್ಲದ್ದಿದರೆ ಖರಾಬ ಎಂದು  ಪರಿಗಣಿಸುವುದು,
ಒತ್ತುವರಿಯಾಗಿರುತ್ತದೆ,
ಹಲವು ಗೋಮಾಳಗಳನ್ನು ಭೂ ಬ್ಯಾಂಕ್ ಮತ್ತು ಕೈಗಾರಿಕ ವಸಹತುಗಳಿಗೆ ಸ್ಥಳಿಯರ ಅನುಮತಿ ಪಡೆಯದೆ ನೀಡಿರಲಾಗಿರುತ್ತದೆ

( ¸ÀAUÀæºÀ ªÀÄÆ®: ¥À±ÀÄ ¥Á®£À E¯ÁSÉ, CgÀtå E¯ÁSÉ, ªÉÄÊvÀæAiÀÄ, ¥À²ÑªÀÄ WÀlÖ PÁgÀå¥ÀqÉ 2011 : CªÀÄÈvï ªÀĺÀ¯ï ªÀgÀ¢, ºÁUÀÄ ¯ÉïÉ, PÀ±Àå¥À ªÀÄvÀÄÛ ¥ÀÄgÀĵÉÆÃvÀÛªÀÄ, 2008.


ನಾಡಿನ ಬಹುತೇಕ ಗ್ರಾಮೀಣ ಬಡ ಜನರು ತಮ್ಮ ಜೀವನೋಪಯಕ್ಕೆ ಈ ಗೋಮಾಳ ಹಾಗು ಕಾವಲುಗಳನ್ನು ಅವಲಂಬಿಸಿದ್ದರು ಕೂಡ ಈ ಸಮುದಾಯದ ಆಸ್ಥಿಗಳನ್ನು ಕೇವಲ ಸರ್ಕಾರಿ ಬಳಕೆಯ ನೆಲ/ಭೂಮಿ ಯೆಂದು ಸರ್ಕಾರಗಳು ಪರಿಗಣಿಸುತಾ ಬಂದಿರುವುದು ಒಂದು ವಿಪರ್ಯಾಸ.  ಕಾಡುಗಳನ್ನು ಸಂರಕ್ಷಿಸುವುದೆಂದರೆ ಶಾಸ್ರಿಯವಾಗಿ ಕೇವಲ ಮರಗಳಿರುವ ಜಾಗವೆಂಬ ಮುಗಿನ ನೇರದ ದೃಷ್ಠಿಕೋನವು ಕೂಡ ಹುಲ್ಲು ಕಾವಲುಗಳು ಮತ್ತು ಗೋಮಾಳಗಳ ಅವನತಿಗೆ ಪರೋಕ್ಷ ಕಾರಣವಾಗಿದೆ. ಇವುಗಳನ್ನು ಸಾಮಾನ್ಯವಾಗಿ “ಅನುಪಯುಕ್ತ” ವೆಂದು ಬಿಂಬಿಸುತ್ತ ಇವುಗಳನ್ನು ಕೈಗಾರಿಕೆ ಮತ್ತು ಇತರೆ ಉದ್ದೇಶಗಳಿಗೆ ನೀಡಲು ಜನಪ್ರತಿನಿಧಿಗಳು ಮತ್ತು ಕಂದಾಯ ಇಲಾಖೆಯು ಸುಲಭ ದಾರಿಮಾಡಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಗುಂಡು ತೋಪು, ಗೋಮಾಳ ಹಾಗು ಕಾವಲುಗಳನ್ನು ಮನಸೋಇಚ್ಚೆಯಗಿ ಹಾಗು ಸ್ಥಳಿಯ ಆಡಳಿತ ಅಥವ ಜನಸಮುದಾಯಗಳ ಗಮನಕ್ಕೆ ತಾರದೆ ಭಾರಿ ಕೈಗಾರಿಕ ವಸಹತು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಪರಭಾರೆ ಮಾಡುತ್ತಿರುವುದು ಈ ನೆಲ-ಜಲ-ಜನ-ಜೀವನ ಸಂಸ್ಕೃತಿಯ ಮೇಲಿನ ಅತಿ ದೊಡ್ಡ ದೌರ್ಜನ್ಯವಾಗಿದೆ. 

ಇಂತಹ ಆತುರದ ನಿರ್ಧಾರಗಳು ಈ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿಸಿರುವ ಗ್ರಾಮೀಣ ಬಡ ಸಮುದಾಯ ಮತ್ತು ಪ್ರಾಣಿ-ಜಾನುವಾರುಗಳ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ. ಇದರ ಫಲಿತಾಂಶವಾಗಿ ಜಿಲ್ಲೆಯ ಸಿರಾ ತಾಲ್ಲೂಕಿನ ಆಕಳು ತಳಿಯಾದ ಹಾವುಗೂಡು ಮತ್ತು ಹಾಗಲವಾಡಿ ತಳಿಗಳು (ಜೆನಿದನ ಅಥವ ದೇವರ ದನ) ನಾಶವಾಗುತ್ತಿರುವದು ಮತ್ತು ಸಾವಿರಾರು ಕುರಿ ಸಾಕಣಿಕೆದಾರರು ಮೇವಿನ ತಾಣವಿಲ್ಲದೆ ತಮ್ಮ ದನಕುರಿಗಳನ್ನ ಮಾರಿಕೊಳ್ಳುತ್ತಿರುವದು ಪ್ರತ್ಯಕ್ಷ ಸಾಕ್ಷಿಯಾಗಿದೆ. 


ವಿಶಿಷ್ಠ ಜೀವವೈವಿಧ್ಯ ಭರಿತ ಈ ಸಮುದಾಯ ನೆಲಗಳನ್ನ ಕಾಪಡುವುದರ ಬಗೆ ಸರ್ಕಾರಗಳ ಯಾವುದೇ ದೂರದೃಷ್ಠಿಯಿಲ್ಲದ ಕಾರ್ಯವೈಖರಿಗಳ ಪರಿಣಾಮವಾಗಿ ನೂರಾರು ವರ್ಷಗಳ ನಿರಂತರ ಪರಿಶ್ರಮದ ಅನಭವದಿಂದ ಬೆಳೆದಬಂದ ಶ್ರೀಮಂತ ಸಂಸ್ಕೃತಿ ಪರಂಪರೆಯನ್ನು ಕಳೆದುಕೊಂಡಂತಾಗಿದೆ. ಕಾವಲುಗಳ ಬಳಕೆಗಿರುವ ಅಸ್ಪಷ್ಟ ಕಾರ್ಯನೀತಿಗಳು ಬಹಳಷ್ಟು ತೊಡುಕಾಗಿದ್ದು ಸ್ಥಳಿಯ ಸಮುದಾಯಗಳ ಹಕ್ಕುಗಳನ್ನು ದಮನಮಾಡುತ್ತಿದೆ.  ಪರಿಣಾಮವಾಗಿ ಇದು ಬಯಾಲಜಿಕಲ್ ಡೈವರಸಿಟಿ ಕಾಯ್ದೆಯಡಿ ಸಂರಕ್ಷಿಸಲಾಗುತ್ತಿರುವ ಪಾರಂಪರಿಕ ಜ್ಞಾನ ಮತ್ತು ಪ್ರಜ್ಞೆಗೆ ಬಹುಮುಖ್ಯ ಅಂಶವಾಗಿರುವ ಸಾಂಪ್ರದಾಯಿಕ ಜಾನುವಾರು ಪಾಲಕರ ಪಾಲನ ಸಾರ್ಮಥ್ಯವನ್ನು ಕುಗ್ಗಿಸಿರುತ್ತದೆ. 

ಒಂದಡೆ ಕಾವಲುಗಳ ಜೊತೆಜೊತೆ ಜೀವನೋಪಾಯದ ಹಕ್ಕುಗಳು ಕಳೆದುಕೊಳ್ಳುತ್ತಿರುವ ಮತ್ತು ಜಾನುವಾರು ಪಾಲಕರ ಅರ್ಥಿಕ ಸ್ಥಿತಿಯ ಹಾಳಾಗುತ್ತಿರುವ ಸಂದರ್ಭದಲ್ಲಿ ಬಯಾಲಜಿಕಲ್ ಡೈವರಸಿಟಿ ಕಾಯ್ದೆ 2002 ಮತ್ತು ಅರಣ್ಯ ಬಳಕೆಯ ಹಕ್ಕು ಕಾಯ್ದೆ, 2002 ನೀಡಿರುವ  ಹಕ್ಕುಗಳನ್ನು ಬಳಸಿಕೊಳ್ಳಲು ಸ್ಥಳೀಯ ಸುಮುದಾಯ ಜನರಗಳ ಆಡಳಿತ ಮತ್ತು ನಿರ್ವಹಣೆ  ಸಮಾಥ್ರ್ಯ ನಿರ್ಮಾಣದಡೆ ಸರ್ಕಾರವು ಕಿಂಚಿತ್ತು ಗಮನ ಹರಿಸಿರುವುದಿಲ್ಲ. ಅರಣ್ಯ ಬಳಕೆ ಹಕ್ಕು ಸಮಿತಿ ಹಾಗು ಜೀವವೈವಿಧ್ಯತೆ ನಿರ್ವಹಣೆ ಸಮಿತಿಗಳನ್ನು ಈ ನೆಲದ ಕಾನೂನಿನ ಆಶಯದಂತೆ ರಚಿಸದೆ ಸ್ಥಳಿಯ ಸಮುದಾಯಜನರ ಮೂಲಭೂತಹಕ್ಕಗಳೊಂದಿಗೆ ರಾಜಿಮಾಡಿಕೊಂಡಿರುವುದು ತೀವ್ರ ಗಂಭೀರಸ್ವರೂಪವಾಗಿದ್ದು, ಎಲ್ಲಾದಕ್ಕು ಮಿಗಿಲಾಗಿ ಇಂತಹ ಅಮೂಲ್ಯ ಪ್ರದೇಶಗಳ ನಿರ್ವಹಣೆ ಜ್ಞಾನವನ್ನು ಕಳೆದು ಕೊಂಡಂತಾಗಿದೆ 


ನೀರಿನ ಪ್ರಮುಖ ಸೆಲೆಗಳಾಗಿ ಜೀವವೈವಿಧ್ಯತೆಯನ್ನು ಸಲಹುತ್ತಿರುವ ತೊಟ್ಟಿಲಾಗಿರುವ ಈ ಸಮುದಾಯದ ನೆಲಗಳನ್ನು ನಾವು ಇಂದು ಪ್ರಜ್ಞಾಪೂರ್ವಕವಾಗಿ ಜೀವವೈವಿಧ್ಯತೆಯ ಸ್ವರ್ಗವಾಗಿ ಸಂರಕ್ಷಿಸುವುದು ಬಹುಮುಖ್ಯವಾಗಿದೆ. ಅಪಾಯದ ಅಂಚಿನಲ್ಲಿರುವ ಜಿಲ್ಲೆಯ ಪ್ರಮುಖ ಗುಂಡು ತೋಪು, ಗೋಮಾಳ ಮತ್ತು ಹುಲ್ಲು ಕಾವಲುಗಳನ್ನು ಗುರುತಿಸಿ ರಕ್ಷಿಸಲು ಸಮುದಾಯಗಳನ್ನು ಒಳಗೊಡಂತೆ ಕ್ರಮಕೂಗೊಳ್ಳುವುದು, ಗ್ರಾಮ ಅಭಿವೃದ್ದಿ ಮತ್ತು ಜಿಲ್ಲಾ ಯೋಜನ ಕಾರ್ಯಕ್ರಮಗಳನ್ನು ರೂಪಿಸುವ ಕಾನೂನು ಮತ್ತು ಕಾರ್ಯಸೂಚಿಗಳಲ್ಲಿ ಗೋಮಾಳ ಹಾಗು ಹುಲ್ಲುಕಾವಲುಗಳನ್ನು ಅಭಿವೃದ್ದಿ ಯೋಜನೆಗಳನ್ನು ಸೇರಿಸುವುದು, ಹಾಗೆ ಸಮುದಾಯಗಳ ಜೀವನೋಪಾಯ ಮತ್ತು ಉಳಿಯುವಿಕೆಯನ್ನು ಒಳಗೊಂಡಂತೆ ಇವುಗಳ ನಿರ್ವಹಣೆಯನ್ನು ಪಾರಂಪರಿಕ ಜೀವವೈವಿಧ್ಯತೆಯ ಸಂರಕ್ಷಿತ ತಾಣ ವೆಂಬ ಟ್ಯಾಗನಡಿ ಸಂರಕ್ಷಿಸಿ ಉಳಿಸಬೇಕಾಗಿದೆ.


ಗ್ರಂಥ ಋಣ 

1. ಅಮೃತಮಹಲ್  ತಳಿ - ಚಂದ್ರಶೇಖರ್ ಕುಣಜಿ, ಪ್ರಕೃತಿ ಪ್ರಕಾಶನ,1998
2. ಏಷಿಯ ಬಿಫೋರ್ ಯುರೋಪ್: ಅನಿಮಲ್ಸ ಅಂಡ್ ಮಾಸ್ಟರ್ಸ್, ಪುಟ 294. ಕೆ.ಎನ್.ಚೌಧರಿ 
3. ಏಷಿಯ ಬಿಫೋರ್ ಯುರೋಪ್: ಎಕಾನಮಿ ಅಂಡ್  ಸಿವಿಲೈಸೇಷನ್ ಅಫ್s ದ ಇಂಡಿಯನ್ ಒಶನ್ ಫ್ರಮ್ ದ ರೈಸ್ ಆಫ್ ಇಸ್ಲಂ ಟು 1750, ಕೆಂಬ್ರೀಜ್ ಯುನಿವರ್ಸಿಟಿ , ಪುಟ 294 ಕೆ.ಎನ್.ಚೌಧರಿ 
4. ಎ ಜರ್ನಿ ಫ್ರಂ ಮದ್ರಾಸ್ ಟು ದ ಕಂಟ್ರೀ ಅಫ್ ಮೈಸೂರ್, ಕೆನರ ಅಂಡ್ ಮಲಬಾರ್- ಫ್ರಾನ್ಸಿಸ್ ಬುಚ್ನಾನ್ 
5. ಕೌಸ್ ಇನ್ ಇಂಡಿಯ 632.2 ದಾಸ್ ಗುಪ್ತ 
6. ಅರ್¯ ರೆಕಾಡ್ಸ್ರ್ಸ ಅಫ್s ಬ್ರಿಟೀಷ್ ಇಂಡಿಯ- ಮಿಲಿಟರಿ ಕನ್ಸಲ್ಟೇಂಟ್ ಅಂಡ್  ಮಿಲಿಟರಿ ಕಂಟ್ರಿ ಕರೆಸ್ಪ್ಪಾಂಡೆನ್ಸ (1760-1761) 
7. ಫಾರ್ಮರ್ ಆಫ್ ಇಂಡಿಯ, ಆಂದ್ರ ಪ್ರದೇಶ, ಮೈಸೂರ್ ಅಂಡ್ ಕೇರಳ. ಎಂ.ಎಸ್. ರಾಂಧವ ಪುಟ 250 
8. ಹಿಸ್ಟರಿ ಅಫ್s ಮೈಸೂರ್ ಸಂಪುಟ-1 ಪುಟ 793 
9. ಕರ್ನಾಟಕ ಗೆಜೇಟಿಯರ್, ಸಂಪುಟ-17 1965 
10. ಮೈಸೂರ್: ಗೆeóÉಟಿಯರ್ ಕಂಪೈಲ್ಡ್ ಫಾರ್ ಗೌರ್ನಮೇಂಟ್. ಬಿ. ಎಲ್ ರೈಸ್ 
11. ಇನವೆಸ್ಟಿಗೇಷನ್ ಇನ್ ಟು ದ ನಿಯೋಲಿತಿಕ್ ಕಲ್ಚ್‍ರ್ ಅಫ್ ದ ಶೋರಪುರ ಡೊಬ, ಸೌತ್ ಇಂಡಿಯ, ಕೆ. ಪದ್ದಯ್ಯ 1973.
12. ಬರಗೂರು, 2011, ಪರಿಸರ ಜಿಜ್ಞಾಸೆ, ಅಭಿರುಚಿ ಪ್ರಕಾಶನ.
13. ಲೇಲೆ, ಕಶ್ಯಪ್, ಅಂಡ್ ಪುರುಷೋತ್ತಮ್, 2008, ಸ್ಟೇಟಸ್ ಪೇಪರ್ ಆನ್ ದ ಕಾಮನ್ ಲ್ಯಾಂಡ್ಸ ಇನ್ ಕರ್ನಾಟಕ.
14. ಶ್ರಿನಿಧಿ ಅಂಡ್ ಲೇಲೆ, 2001, ಫಾರೆಸ್ಟ್ ಟೇನ್ಯೂರ್ ರೇಜಿಮ್ಸ್ ಇನ್ ದ ಕರ್ನಾಟಕ ಅಂಡ್ ದ ವೆಸ್ಟರ್ನ್ ಘಾಟ್ಸ್: ಅ ಕಾಂಪೇನ್ಡಿಯಮ್.
15. ವಿಲ್ಕಸ್, ಎಮ್1817, ಹಿಸ್ಟಾರಿಕಲ್ ಸ್ಕೆಚ್ಸ್ ಆಫ್ ದ ಸೌತ್ ಆಫ್ ಇಂಡಿಯ, (ಲಂಡನ್)
16. ನಾಡಕರಣಿ, ಎಂ.ವಿ., 1990. ಯೂಸ್ ಅಂಡ್ ಮ್ಯಾನೇಜ್‍ಮೆಂಟ್ ಆಫ್ ಕಾಮನ್ ಲ್ಯಾಂಡ್ಸ: ಟುವರ್ಡ ಎನಿವಿರಾನ್‍ಮೆಂಟಲಿ ಸೌಂಡ್ ಸ್ಟ್ರಟರ್ಜಿ.
17. ಅಮೃತ್ಮಹಲ್ ತಳಿ ಮತ್ತು ಕಾವಲು ಜೀವೈವಿಧ್ಯತೆ ಅಧ್ಯಯನ ವರದಿ,ಮೈತ್ರಯ-ಪಶ್ಚಿಮ ಘಟ್ಟ ಕಾರ್ಯಪಡೆ, 2011

ದಿನ ಪತ್ರಿಕೆಗಳು 
1. ದ ಹಿಂದು : ಏಪ್ರಿಲ್ 4, ಸೋಮವಾರ, 2011 
2. ಡೆಕ್ಕನ್ ಕ್ರಾನಿಕಲ್: ಸೆಪ್ಟಂಬರ್ 8, 2010

3 comments:

  1. ಅಂತ್ಯಂತ ಮಹತ್ವದ ಮಾಹಿತಿಗಳಿವೆ

    ReplyDelete
  2. A very thought-provoking article. I would like to draw your kind attention to my own blog on Desi cow rearing and the concerns of environmentalists.
    I am an admirer of Allan Savory's Holistic Management method of employing livestock to regreen desertified animals. Savory's method has been criticised as well as admired; I fnd it applicable to Indian conditions and has also been supported by Dr. Vandana Shiva. Whether desi cows can reforest/afforest desertified areas and (instead): what desertify forested areas depends not on cows but on their management, which is us humans.
    An added difference is that, since Hindus don't eat cows, their nutrient recycling - with panchagavya added - is marvellous.
    Regards, and a wonderful article I say. Please do translate the Kannada part into Marathi and Hindi as well as into English if it differs in content from the English ones you have already posted.
    My own blog: http://hinducause.org/2017/06/25/desi-cows-climate-change-global-warming-what-hindus-should-know/

    ReplyDelete